Friday, November 22, 2024

ರಾಜ್ಯದಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ ಕೇರಳ ಸಿಎಂ ವಿಜಯನ್

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್-ಬಿಜೆಪಿ ಸಮಾವೇಶಗಳ ಮೂಲಕ ಕಸರತ್ತು ನಡೆಸುತಿದ್ರೆ, ಇತ್ತ ರಾಜ್ಯ ರಾಜಕಾರಣದಲ್ಲೇ ವಿಶೇಷತೆ ಹೊಂದಿರುವ ಗಡಿನಾಡಿನಲ್ಲಿ ಸಿಪಿಐಎಂ ಪಕ್ಷ ರಾಜಕೀಯ ಸಮಾವೇಶದ ಮೂಲಕ ಸದ್ದು ಮಾಡ್ತಿದೆ.

ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೆಪಲ್ಲಿಯಲ್ಲಿ ನಡೆದ ಸಮಾವೇಶದಲ್ಲಿ ಸಿಪಿಎಂ ಪಕ್ಷದ ನಾಯಕ, ಕೇರಳದ ಮುಖ್ಯಮಂತ್ರಿ ಕಾಮ್ರೆಡ್ ಪಿಣರಾಯಿ ವಿಜಯನ್ ಭಾಗವಹಿಸಿದರು.

ಮೊದಲು ಕನ್ನಡದಲ್ಲೇ ಭಾಷಣ ಪ್ರಾರಂಭಿಸಿದ ಪಿಣರಾಯಿ ವಿಜಯನ್, ಬಿಜೆಪಿ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ್ರು. ಗತಕಾಲದಲ್ಲಿ ಈ ಭೂಮಿ ಪ್ರಗತಿಪರ ಚಳುವಳಿಗೆ ತವರೂರಾಗಿತ್ತು. ಜಾತಿ ವ್ಯವಸ್ಥೆ, ಅಸಮಾನತೆ, ದಲಿತರ ಶೋಷಣೆಗಳ ವಿರುದ್ದ ಹೋರಾಡಿದ್ದ ಪ್ರಗತಿಪರ ಶಕ್ತಿಗಳ ಭೂಮಿ ಇದು. ಕೋಮುವಾದಿ ಶಕ್ತಿಗಳ ಬೆಳವಣಿಗೆ ಕರ್ನಾಟಕಕ್ಕೆ ಮಾರಕವಾಗಿದ್ದು, ಕೋಮುವಾದಿಗಳ ಬೆಳವಣಿಗೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಕಿತ್ತುಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ರಾಜ್ಯದಲ್ಲಿ ನಡೆದ ಸಾಹಿತಿ ಗೌರಿ ಲಂಕೇಶ್ ರ ಕೊಲೆ, ಕೆ.ಎಸ್.ಭಗವಾನ್​ಗೆ ಕಿರುಕುಳ, ಪ್ರೋ.ಯು.ಆರ್ ಅನಂತಮೂರ್ತಿ ರಂತಹ ಜ್ಞಾನಿಗಳು ಸಂಘಪರಿವಾರದಿಂದ ಬಹಳಷ್ಟು ನೋವನ್ನು ಅನುಭವಿಸಿದ್ದಾರೆ. ಇವರಿಗೆ ಪಾಕಿಸ್ತಾನಕ್ಕೆ ಟಿಕೆಟ್ ಕೊಟ್ಟು ಕಳಿಸಿದ ಇತಿಹಾಸ ಮರೆಯೋಹಾಗಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನೂ ಉತ್ತರ ಭಾರತದಲ್ಲಿ ಕೋಮು ಶಕ್ತಿಗಳ ಉಪಟಳ ಅತಿಯಾಗಿ ನಡೆಯುತ್ತಿದೆ. ಪಠ್ಯಪುಸ್ತಕಗಳನ್ನು ಕಾವೀಕರಣ ಮಾಡುತಿದ್ದಾರೆ. ಆರನೇ ತರಗತಿಯಲ್ಲಿ ಸಂಘ ಪರಿವಾರದ ಹೆಗಡೆವಾರ್ ವಿಷಯ ಸೇರ್ಪಡೆ ಕುತಂತ್ರ. ಹತ್ತನೇ ತರಗತಿಯ ಪಠ್ಯಪುಸ್ತಗಳಲ್ಲಿ ಭಗತ್ ಸಿಂಗ್ ಕಥಾ ಭಾಗ ತೆಗೆದು ಹಾಕಿದ್ದಾರೆ. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಬಿಜೆಪಿಯವರ ಕರಾಳ ಮುಖ ತೋರಿಸುತ್ತಿದೆ. ಹಿಜಾಬ್ ಹೆಸರಿನಲ್ಲಿ ಗಲಾಟೆ ಹುನ್ನಾರ ಇದರ ಭಾಗವಾಗಿದೆ. ಕೋಮುವಾದ ಧ್ರುವೀಕರಣ ಇದಕ್ಕೆಲ್ಲ ಕಾರಣ. ಅಲ್ಪಸಂಖ್ಯಾತರ ಮೇಲೆ ಅಧಿಕಾರ ದುರ್ಬಳಕೆ , ಹಿಂದು ಐಕ್ಯ ವೇದಿಕೆಗಳು ಕೋಮುವಾದಿಗಳ ಪ್ಯಾಕ್ಟರಿ ಆಗ್ತಾ ಇದೆ, ಲವ್ ಜಿಹಾದಿ ಅಪವಾದ ಪ್ರಚಾರಗಳು ಸಂಘ ಪರಿವಾರದ ಪ್ರಮುಖ ಭಾಗಗಳಾಗಿವೆ ಎಂದರು.

ಕೋಮುವಾದ ವಿರುದ್ದ ಹೋರಾಟ ಮಾಡದೇ ಹೋದಲ್ಲಿ ರಾಜ್ಯ, ದೇಶದ ಜನರಿಗೆ ಅಪಾಯ ತಪ್ಪಿದ್ದಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂಘಪರಿವಾರ ಧ್ವಂಸಗೊಳಿಸುತ್ತಿದೆ. ಸಂಕುಚಿತ ರಾಷ್ಟ್ರವಾದ, ರಾಷ್ಟ್ರ ಪ್ರೇಮ ಅಂದ್ರೆ ಹಿಂದುತ್ವ ಪ್ರೇಮ ಎಂಬ ಕಲ್ಪನೆ ಮೂಡಿಸುತ್ತಿದ್ದಾರೆ. ರಾಷ್ಟ್ರೀಯತೆ ಕೆಲವು ವ್ಯಕ್ತಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಗುಲಾಮರಂತೆ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದವರೆಲ್ಲ ದೇಶ ಪ್ರೇಮಿಗಳು, ದೇಶಪ್ರೇಮದ ಹೆಸರಲ್ಲಿ ಕಾರ್ಪೋರೇಟರ್ ಗಳನ್ನು ಬೆಳೆಸಿ ಅಸಮಾನತೆಗೆ ನಾಂದಿ‌ಹಾಡ್ತಿದ್ದಾರೆಂದು ಕೇರಳ ಸಿಎಂ ದೂರಿದರು.

ಒಟ್ಟಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಕೆಂಪು ಬಾವುಟ ಹಾರಿಸೋಕೆ ಸಿದ್ದತೆ ಜೋರಾಗಿದ್ದು, ಸಿಪಿಐಎಂ ಪಕ್ಷದ ಮಾಜಿ ಶಾಸಕ ಜಿ ವಿ ಶ್ರೀರಾಮರೆಡ್ಡಿ ನಿಧನದ ನಂತರ ಮೊದಲ ಬಾರಿಗೆ ಬಾಗೇಪಲ್ಲಿಯಲ್ಲಿ ರಾಜ್ಯಮಟ್ಟದ ಸಿಪಿಐಎಂ ಪಕ್ಷದ ರಾಜಕೀಯ ಸಮಾವೇಶ ನಡೆದಿದ್ದು ವಿಶೇಷವಾಗಿದ್ದು, ಕಾಂಗ್ರೆಸ್ ಶಾಸಕ ಎಸ್. ಎನ್. ಸುಬ್ಬಾರೆಡ್ಡಿಗೆ ತೀವ್ರ ಪೈಪೋಟಿ ಏರ್ಪಡುವುದರಲ್ಲಿ ಎರಡು ಮಾತಿಲ್ಲ.

ಮಲ್ಲಪ್ಪ. ಎಂ.ಶ್ರೀರಾಮ್. ಪವರ್ ಟಿವಿ, ಚಿಕ್ಕಬಳ್ಳಾಪುರ.

RELATED ARTICLES

Related Articles

TRENDING ARTICLES