ಪ್ರಯತ್ನ ಪಟ್ರೆ ಪ್ರಯೋಗಗಳನ್ನು ಬೆಳಕಿಗೆ ತರೋದು ಕಷ್ಟವೇನಲ್ಲ ಅನ್ನೋದಕ್ಕೆ ಇತ್ತೀಚಿನ ನಮ್ಮ ಸ್ಯಾಂಡಲ್ವುಡ್ ಇಡೀ ಭಾರತೀಯ ಚಿತ್ರರಂಗಕ್ಕೆ ಮಾದರಿ ಆಗ್ತಿದೆ. ಕೆಜಿಎಫ್, ವಿಕ್ರಾಂತ್ ರೋಣ ಬಳಿಕ ಗುರುಶಿಷ್ಯರು ಟಾಕ್ ಆಫ್ ದಿ ಟೌನ್ ಆಗಿದೆ. ಕಾರಣ ಅದ್ರ ಮೈಂಡ್ ಬ್ಲೋಯಿಂಗ್ ಟ್ರೈಲರ್. ಆಮೀರ್ ಖಾನ್ರ ಲಗಾನ್ ಫ್ಲೇವರ್ನಲ್ಲಿರೋ ಅದ್ರ ಇಂಟೆನ್ಸ್ ಸ್ಟೋರಿ ಏನು ಅನ್ನೋದ್ರ ಜೊತೆ ಹಳೇ ಬೇರು, ಹೊಸ ಚಿಗುರಿಗೆ ಸಾಕ್ಷಿಯಾದ ಇವೆಂಟ್ ಹೈಲೈಟ್ಸ್ ಇಲ್ಲಿದೆ ನೀವೇ ಓದಿ.
- ಶಾಲೆ & ಊರನ್ನ ಉಳಿಸೋಕೆ ಮೇಷ್ಟ್ರ ಮಾಸ್ಟರ್ಪ್ಲಾನ್ ಕಥೆ
- ಸ್ಟಾರ್ ಕಿಡ್ಸ್ ತಂಡ ಕಟ್ಟಿದ ಕುಚಿಕುಗಳು.. 23ಕ್ಕೆ ಗೇಮ್ ಬಿಗಿನ್ಸ್
- ಮಾಸ್ತಿ ಮಸ್ತ್ ಡೈಲಾಗ್ಸ್.. ಶರಣ್ v/s ಅಪೂರ್ವ ಕಾಸರವಳ್ಳಿ
ಯೆಸ್.. ಇದು ರೀಸೆಂಟ್ ಆಗಿ ರಿಲೀಸ್ ಆಗಿರೋ ಗುರುಶಿಷ್ಯರು ಚಿತ್ರದ ಟ್ರೈಲರ್ ಝಲಕ್. 90ರ ದಶಕದ ಬ್ಯಾಕ್ಡ್ರಾಪ್ನಲ್ಲಿ ನಡೆಯೋ ದೇಸಿ ಕ್ರೀಡೆ ಕ್ರಿಕೆಟ್ನ ಪ್ರಧಾನವಾಗಿಟ್ಟುಕೊಂಡು ಮಾಡಿರೋ ಹಂಡ್ರೆಡ್ ಪರ್ಸೆಂಟ್ ಸ್ಪೋರ್ಟ್ಸ್ ಡ್ರಾಮಾ. ಜಡೇಶ್ ಕೆ ಹಂಪಿ ನಿರ್ದೇಶನದ ಈ ಸಿನಿಮಾ, ಟ್ರೈಲರ್ನಿಂದಲೇ ಎಲ್ಲರ ಹುಬ್ಬೇರಿಸಿದ್ದು, ಸ್ಯಾಂಡಲ್ವುಡ್ ಅಧ್ಯಕ್ಷ ಶರಣ್ ಕರಿಯರ್ನ ದಿ ಬೆಸ್ಟ್ ಸಿನಿಮಾ ಆಗೋ ಮನ್ಸೂಚನೆ ನೀಡಿದೆ.
ಶರಣ್ ಹಿಟ್ ಸಿನಿಮಾಗಳ ಹಿಂದಿನ ಮಾಸ್ಟರ್ಮೈಂಡ್ ತರುಣ್ ಸುಧೀರ್ ಮತ್ತೊಮ್ಮೆ ಈ ಸಿನಿಮಾಗಾಗಿ ಶರಣ್ ಜೊತೆ ಕೈ ಜೋಡಿಸಿದ್ದು, ಇಬ್ಬರೂ ಒಟ್ಟಿಗೆ ಗುರುಶಿಷ್ಯರು ಚಿತ್ರವನ್ನು ನಿರ್ಮಿಸಿದ್ದಾರೆ. ದೈಹಿಕ ಶಿಕ್ಷಕನಾಗಿ ಶರಣ್ ಹಳ್ಳಿಯೊಂದರ ಸರ್ಕಾರಿ ಶಾಲೆಗೆ ಎಂಟ್ರಿ ಕೊಡ್ತಾರೆ. ನಂತ್ರ ಅಲ್ಲಿನ ಮಕ್ಕಳನ್ನ ಸೇರಿಸಿಕೊಂಡು ಖೋ ಖೋ ಟೀಂನ ಕಟ್ಟೋ ಅವ್ರು ಶಾಲೆಯ ಉಳಿವಿಗಾಗಿ ದೊಡ್ಡ ಹೋರಾಟ ಮಾಡ್ತಾರೆ. ಮುಂದೆ ಅದು ಊರ ಅಸ್ತಿತ್ವಕ್ಕಾಗಿ ನಡೆಯೋ ಕಾಳಗವಾಗಿ ಮಾರ್ಪಾಡಾಗುತ್ತೆ.
ಅಪೂರ್ವ ಕಾಸರವಳ್ಳಿ ಖಳನಾಯಕನಾಗಿ ಅಬ್ಬರಿಸಿದ್ದು, ಶರಣ್ ಜೊತೆ ಹಿರಿಯ ನಟ ದತ್ತಣ್ಣ, ನಾಯಕಿಯಾಗಿ ನಿಶ್ವಿಕಾ ನಾಯ್ಡು ಸೇರಿದಂತೆ ಬಹುದೊಡ್ಡ ತಾರಾಗಣವಿದೆ. ಲವ್ಲಿಸ್ಟಾರ್ ಪ್ರೇಮ್, ಬುಲೆಟ್ ಪ್ರಕಾಶ್, ಶರಣ್ ಹೀಗೆ ಬಹುತೇಕ ಎಲ್ಲಾ ಸ್ಟಾರ್ ಮಕ್ಕಳೇ ಬಣ್ಣ ಹಚ್ಚಿರೋ ಈ ಸಿನಿಮಾದ ಅಸಲಿ ಗೇಮ್ ಇದೇ ಸೆಪ್ಟೆಂಬರ್ 23ಕ್ಕೆ ದೊಡ್ಡ ಪರದೆ ಮೇಲೆ ಶುರುವಾಗಲಿದೆ. ಇನ್ನು ಟಗರು, ಸಲಗ ರೈಟರ್ ಮಾಸ್ತಿ ಅವ್ರೇ ಈ ಚಿತ್ರಕ್ಕೂ ಡೈಲಾಗ್ಸ್ ಪೋಣಿಸಿದ್ದು, ಖೋ ಖೋ ಗೇಮ್ ಯಾಕೆ ಕ್ರಿಕೆಟ್ ತರಹ ಬೆಳೆದಿಲ್ಲ ಅನ್ನೋದಕ್ಕೆ ಉತ್ತರ ಕೊಡೋ ಡೈಲಾಗ್ ಬಹಳ ಲಾಜಿಕ್ನಿಂದ ಕೂಡಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಗುರುಶಿಷ್ಯರು ಸಿನಿಮಾ ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ರ ಲಗಾನ್ ಸಿನಿಮಾನ ನೆನಪಿಸ್ತಿದೆ. ಹೌದು.. ಕಲಾವಿದರು ಹಾಗೂ ತಂತ್ರಜ್ಞರ ಹಾರ್ಡ್ವರ್ಕ್, ಡೆಡಿಕೇಷನ್, ಸಿನಿಮಾದಲ್ಲಿನ ಇಂಟೆನ್ಸ್ ಎಮೋಷನ್ಸ್ ನೋಡ್ತಿದ್ರೆ ಗುರು ಶಿಷ್ಯರು ಕೂಡ ಲಗಾನ್ ಪ್ಯಾಟ್ರನ್ನಲ್ಲಿರೋದು ಸ್ಪಷ್ಟವಾಗುತ್ತೆ. ಅಲ್ಲಿ ಆಮೀರ್ ಖಾನ್, ರೈತರ ತೆರಿಗೆ ವಿನಾಯಿತಿಗೆ ಬ್ರಿಟಿಷರ ವಿರುದ್ಧ ಕ್ರಿಕೆಟ್ ಮೂಲಕ ಹೋರಾಟ ನಡೆಸಿದ್ರು. ಇಲ್ಲಿ ಶರಣ್ ಕೂಡ ಟೀಚರ್ ಆಗಿ ಖೋ ಖೋ ಗೇಮ್ ಮುಖೇನ ಹೋರಾಡ್ತಾರೆ.
- ದ್ವಾರಕೀಶ್ಗೆ ಬೆಳ್ಳಿ ಕಿರೀಟ.. ಹಿರಿ – ಕಿರಿಯರ ಮಹಾ ಸಂಗಮ
- ಶರಣ್- ತರುಣ್ ಗೆಳೆಯರ ಬಳದಲ್ಲಿ ವಿಜಿ, ಪ್ರೇಮ್, ಪ್ರಜ್ವಲ್
ಗುರುಶಿಷ್ಯರು ಅಂದಾಕ್ಷಣ ನೆನಪಾಗೋದೇ ಕರ್ನಾಟಕದ ಪ್ರಚಂಡ ಕುಳ್ಳ ದ್ವಾರಕೀಶ್. ರೀಸೆಂಟ್ ಆಗಿ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಡ್ರನ್ ಗುರುಶಿಷ್ಯರು ಟ್ರೈಲರ್ ಲಾಂಚ್ ಇವೆಂಟ್ಗೆ ಸ್ವತಃ ಲಿವಿಂಗ್ ಲೆಜೆಂಡ್ ದ್ವಾರಕೀಶ್ ಅವ್ರೇ ಮುಖ್ಯ ಅತಿಥಿಯಾಗಿ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ರು. ಅವ್ರಿಗೆ ತರುಣ್ ಸುಧೀರ್- ಶರಣ್ ಬಳಗ ಬೆಳ್ಳಿ ಕಿರೀಟ ತೊಡಿಸಿ, ಗೌರವ ಸಮರ್ಪಿಸಿದ್ದು ವಿಶೇಷ.
ಇನ್ನು ಹಿರಿಯನಟ ದ್ವಾರಕೀಶ್ ಜೊತೆ ಹಿರಿಯ ನಟಿ ಲಕ್ಷ್ಮಿದೇವಮ್ಮ ಹಾಗೂ ಉಮೇಶ್ ಅವ್ರಿಗೂ ಸನ್ಮಾನ ಮಾಡಿ ವಿಶೇಷ ಗೌರವ ಸಲ್ಲಿಸಿತು ಚಿತ್ರತಂಡ. ಅಲ್ಲದೆ, ಶರಣ್- ತರುಣ್ ಗೆಳೆಯರ ಬಳಗದ ಪ್ರತಿಯೊಬ್ಬರೂ ಈ ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿ ಆಗಿದ್ದು ವಿಶೇಷ. ನಟ ದುನಿಯಾ ವಿಜಯ್, ಲವ್ಲಿಸ್ಟಾರ್ ಪ್ರೇಮ್ ಹಾಗೂ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕುಚಿಕುಗಳಿಗೆ ಬೆಸ್ಟ್ ವಿಶಸ್ ಹೇಳಿ, ತುಂಬು ಹೃದಯದಿಂದ ಸಿನಿಮಾ ಹಿಟ್ ಆಗಲಿ ಅಂತ ವೇದಿಕೆಯಲ್ಲಿ ಹಾರೈಸಿದ್ರು.
ನಟ ರವಿಶಂಕರ್ ಗೌಡ ಸೇರಿದಂತೆ ಚಿತ್ರತಂಡದ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಕಾರ್ಯಕ್ರಮಕ್ಕೆ ಮೆರಗು ತಂದರು. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ಹಳ್ಳಿ ಹುಡ್ಗಿಯಾಗಿ ಕಾಣಿಸಿಕೊಂಡಿದ್ದು, ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ. ಒಟ್ಟಾರೆ ಗುರುಶಿಷ್ಯರು ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ವಿನೂತನ ಪ್ರಯತ್ನ ಅನಿಸಿಕೊಳ್ಳಲಿದೆ. ಇಂತಹ ಪ್ರಯೋಗಗಳನ್ನ ಹೊರತರಲು ಮುಂದಾದ ಶರಣ್- ತರುಣ್ರ ಕ್ರಿಯಾಶೀಲತೆಗೆ ಹ್ಯಾಟ್ಸಪ್ ಹೇಳಲೇಬೇಕು. ಸಿನಿಮಾ ಇದೇ ಸೆಪ್ಟೆಂಬರ್ 23ಕ್ಕೆ ತೆರೆಗೆ ಬರಲಿದ್ದು, ಖೋ ಖೋ ಗೇಮ್ನ ಅಂದು ಮಿಸ್ ಮಾಡದೆ ಕಣ್ತುಂಬಿಕೊಳ್ಳಿ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ