Wednesday, January 22, 2025

ಸಾವಿನಲ್ಲೂ ಒಂದಾದ ದಂಪತಿ…..!

ಬಳ್ಳಾರಿ : ವಿದ್ಯುತ್ ತಂತಿ ಸ್ಪರ್ಶಿಸಿ ಕಲಾವಿದ ದಂಪತಿ ದಾರುಣವಾಗಿ ಸಾವಿಗೀಡಾದ ಘಟನೆ ಬಳ್ಳಾರಿಯ ಬಂಡಿಹಟ್ಟಿ ಪ್ರದೇಶದಲ್ಲಿ ನಡೆದಿದೆ. ಬಳ್ಳಾರಿಯ ಹೆಸರಾಂತ ಬಯಲಾಟ ಕಲಾವಿದ ಪಂಪಾಪತಿ (68) ಹಾಗೂ ಪತ್ನಿ ದ್ಯಾವಮ್ಮ (65)ಸಾವಿಗೀಡಾದ ದಂಪತಿ. ಮಳೆ ಬಂದ ಹಿನ್ನೆಲೆಯಲ್ಲಿ ಮನೆಯ ಮಹಡಿಯ ಮೇಲೆ ನಿಂತಿದ್ದ ನೀರು ಹಾಗೂ ಕಸವನ್ನು ತೆಗೆಯುವಾಗ ವಿದ್ಯುತ್ ಅವಘಢ ನಡೆದಿದೆ.ಪಂಪಾಪತಿ ಹಾಗೂ ದ್ಯಾವಮ್ಮ ಮನೆ ಮೇಲೆ ಹೋಗಿ ಕೆಲಸ ಮಾಡುತ್ತಿದ್ದಾಗ ದ್ಯಾವಮ್ಮಗೆ ಮೊದಲು ವಿದ್ಯುತ್ ತಂತಿ ತಗುಲಿದೆ. ಬಳಿಕ ಪಂಪಾಪತಿ ಅವರು ದ್ಯಾವಮ್ಮರನ್ನು ರಕ್ಷಿಸಲು ಹೋದಾಗ ಅವರಿಗೂ ವಿದ್ಯುತ್ ಪ್ರವಹಿಸಿದ್ದು, ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇನ್ನೂ ಕಲೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿರಿಸಿಕೊಂಡು ತಾವಷ್ಟೇ ಪಾತ್ರ ಮಾಡದೇ ಮತ್ತಷ್ಟು ಜನರಿಗೆ ಬಯಲಾಟ ಕಲೆಯನ್ನು ಹೇಳಿಕೊಡುತ್ತಿದ್ದರು. ಪಂಪಾಪತಿ ಅವರ ಈ ಸಾಧನೆಗೆ 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.ತಮ್ಮ ಜೀವನದ್ದೂಕ್ಕೂ ಎರಡು ಸಾವಿರಕ್ಕೂ ಹೆಚ್ಚು ಬಯಲಾಟ ಪ್ರದರ್ಶನವನ್ನು ನೀಡಿದ ಪಂಪಾಪತಿ ಅವರು ನೂರಾರು ಹಳ್ಳಿಯ ಯುವಕರಿಗೆ ಬಯಲಾಟದ ಬಗ್ಗೆ ಆಸಕ್ತಿ ಮೂಡಿಸುವಂತೆ ಮಾಡಿದ್ರು. ಇನ್ನೂ ಇತ್ತೀಚೆಗೆ ವಯಸ್ಸಾದ್ರೂ ಕೂಡ ಆ ಬಯಲಾಟ ವೇಳೆ ಹೋಗಿ ತರಬೇತಿಯನ್ನು ನೀಡುತ್ತಿದ್ರು. ಅಲ್ಲದೇ ಸಾರಥಿಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದ ಪಂಪಾಪತಿಯನ್ನು ಸಾರಥಿ ಪಂಪಾಪತಿಯೆಂದೇ ಕರೆಯುತ್ತಿದ್ದರು.

ಎರಡು ಸಾವಿರಕ್ಕೂ ಹೆಚ್ಚು ಬಯಲಾಟ ಕಾರ್ಯಕ್ರಮಗಳಲ್ಲಿ ಸಾರಥಿ ಪಾತ್ರದಲ್ಲಿ ಪಂಪಾಪತಿ ಅಭಿನಯಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿ ನಾನಾ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದರು. ಮೇರು ಕಲಾವಿದ ಪಂಪಾಪತಿ ದಂಪತಿಯ ಸಾವಿನಿಂದ ಬಯಲಾಟ ಕಲೆಗೆ ಅಪಾರ ನಷ್ಟವಾಗಿದೆ. ಸಾವಿನಲ್ಲೂ ದಂಪತಿ ಒಂದಾಗಿರುವುದು ದುರಂತವೇ ಸರಿ.

ಬಸವರಾಜ್ ಹರನಹಳ್ಳಿ ಪವರ್ ಟಿವಿ,ಬಳ್ಳಾರಿ.

RELATED ARTICLES

Related Articles

TRENDING ARTICLES