Wednesday, September 27, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeಸಿನಿಮಾವೀರಭದ್ರ ಮೆಚ್ಚುವ ರುದ್ರನ 'ಡೊಳ್ಳು' ಕುಣಿತ: 4.5/5

ವೀರಭದ್ರ ಮೆಚ್ಚುವ ರುದ್ರನ ‘ಡೊಳ್ಳು’ ಕುಣಿತ: 4.5/5

ಡೊಳ್ಳು.. ಬರೀ ಪ್ರಶಸ್ತಿಗಳ ಪಟ್ಟಿಯಲ್ಲಷ್ಟೇ ಸದ್ದು ಮಾಡ್ತಿರೋ ಸಿನಿಮಾ ಅಲ್ಲ. ಕಮರ್ಷಿಯಲ್ ಸಿನಿಮಾಗಳಂತೆ ರಾಜ್ಯಾದ್ಯಂತ 75ಕ್ಕೂ ಅಧಿಕ ಸೆಂಟರ್​ಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟಕ್ಕೂ ಸಿನಿಮಾದ ಕಥೆ ಏನು..? ಆರ್ಟಿಸ್ಟ್​ಗಳ ಪರ್ಫಾಮೆನ್ಸ್ ಹೇಗಿದೆ..? ನ್ಯಾಷನಲ್ ಅವಾರ್ಡ್​ ಬರಲು ಕಾರಣವಾದ ಅಂಶಗಳೇನು ಅನ್ನೋದ್ರ ಡಿಟೈಲ್ಡ್ ರಿವ್ಯೂ ರಿಪೋರ್ಟ್​ ಇಲ್ಲಿದೆ ನೋಡಿ.

  • 75 ಸೆಂಟರ್​ಗಳಲ್ಲಿ ದೇಶ ಮೆಚ್ಚಿದ ಡೊಳ್ಳಿಗೆ ಮುತ್ತಿಟ್ಟ ಪ್ರೇಕ್ಷಕ..!
  • ಸಿನಿಮೋತ್ಸಾಹಿ ಯುವ ಮನಸ್ಸುಗಳ ಕಲಾರಾಧನೆಯ ಪ್ರತೀಕ

ಸಿನಿಮಾನೇ ಒಂದು ಕಲೆ. ಅಂಥದ್ರಲ್ಲಿ ಆ ಕಲೆಯಲ್ಲಿ ಮತ್ತೊಂದು ಕಲೆಯನ್ನ ಪ್ರೋತ್ಸಾಹಿಸೋ ಅಂತಹ ಕಥಾನಕ ಇದ್ರೆ ಅದ್ರ ಮಜಾನೇ ಬೇರೆ. ಸದ್ಯ ಅಂಥದ್ದೇ ಸಿನಿಮಾಗಳ ಸಾಲಿಗೆ ಸೇರೋ ಚಿತ್ರ ಡೊಳ್ಳು. ಟೈಟಲ್​ಗೆ ತಕ್ಕನಾಗಿ ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡಿತ್ತು ಡೊಳ್ಳು. ಸಾಲು ಸಾಲು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿತ್ತು. ಇದೀಗ ಥಿಯೇಟರ್​ಗೆ ಕಾಲಿಟ್ಟಿದೆ. ಸುಮಾರು 75ಕ್ಕೂ ಅಧಿಕ ಸೆಂಟರ್​ಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣ್ತಿದೆ.

ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ, ಈ ರೀತಿ ಜನಪದ ಕಲೆ ಡೊಳ್ಳು ಕುಣಿತದ ಬಗ್ಗೆ ಯುವ ಸಿನಿಮೋತ್ಸಾಹಿ ತಂಡ ಸಿನಿಮಾ ಮಾಡಿರೋದು ನಿಜಕ್ಕೂ ಶ್ಲಾಘನೀಯ. ಇವ್ರ ಈ ಮಹತ್ವದ ಹೆಜ್ಜೆಯನ್ನ ಎಲ್ಲರೂ ಮೆಚ್ಚಲೇಬೇಕು. ಮಾಜಿ ಸಿಎಂ ಸಿದ್ದರಾಮಯ್ಯ, ಮುರುಗೇಶ್ ನಿರಾಣಿ, ವಿಜಯೇಂದ್ರ ಸೇರಿದಂತೆ ರಾಜಕೀಯ ಗಣ್ಯರ ಜೊತೆ ಚಿತ್ರರಂಗದ ಮಂದಿ ಕೂಡ ಡೊಳ್ಳು ವೀಕ್ಷಿಸಿ, ಶಹಬ್ಬಾಶ್ ಅಂದಿದ್ದಾರೆ. ಅಷ್ಟಕ್ಕೂ ಡೊಳ್ಳು ಚಿತ್ರದ ಅಸಲಿಯತ್ತೇನು ಅಂತೀರಾ..? ಮುಂದೆ ನೋಡಿ.

ಚಿತ್ರ: ಡೊಳ್ಳು

ನಿರ್ದೇಶನ: ಸಾಗರ್ ಪುರಾಣಿಕ್

ನಿರ್ಮಾಣ: ಪವನ್ ಒಡೆಯರ್, ಅಪೇಕ್ಷಾ ಪುರೋಹಿತ್

ಸಂಗೀತ: ಅನಂತ್ ಕಾಮತ್

ಸಿನಿಮಾಟೋಗ್ರಫಿ: ಅಭಿಲಾಷ್

ತಾರಾಗಣ: ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ಶರಣ್ಯಾ ಸುರೇಶ್, ಚಂದ್ರ ಮಯೂರ್, ವಿಜಯಲಕ್ಷ್ಮೀ, ಡಾ. ಪ್ರಭುದೇವ, ವರುಣ್ ಶ್ರೀನಿವಾಸ್ ಮುಂತಾದವರು.

ಡೊಳ್ಳು ಕಥಾಹಂದರ

ಅಮೋಘವಾದ ಡೊಳ್ಳು ಕುಣಿತದಿಂದ ಮಾದಪ್ಪನ ಮೆಚ್ಚಿಸೋ ಕಾಳ. ಅದನ್ನ ಮುಂದಿನ ಜನರೇಷನ್​ಗೂ ಉಳಿಯಬೇಕು ಅನ್ನೋ ಉದ್ದೇಶದಿಂದ ಮಗ ರುದ್ರ ಹಾಗೂ ಆತನ ಗೆಳೆಯರಿಗೂ ಡೊಳ್ಳು ಕುಣಿತ ಕಲಿಸುತ್ತಾನೆ. ಆದ್ರೆ ಅದರಿಂದ ಹೊಟ್ಟೆ ತುಂಬಲ್ಲ, ಜೀವನ ಸಾಗಲ್ಲ ಅನ್ನೋ ಕಾರಣಕ್ಕೆ ತಂಡದಲ್ಲಿ ಒಬ್ಬ ಆತ್ಮಹತ್ಯೆಗೆ ಗುರಿಯಾಗುತ್ತಾನೆ. ಉಳಿದವ್ರು ರುದ್ರನ ಮಾತಿಗೆ ಬೆಲೆ ಕೊಡದೆ ಹಳ್ಳಿ ಬಿಟ್ಟು ಬೆಂಗಳೂರು ಸಿಟಿ ಸೇರಿಕೊಳ್ತಾರೆ. ಅಣು ರಣುವಿನಲ್ಲೂ ಡೊಳ್ಳನ್ನೇ ತುಂಬಿಕೊಂಡಿದ್ದ ರುದ್ರ, ಗೆಳೆಯರನ್ನ ವಾಪಸ್ಸು ಕರೆತಂದು ಊರಿನ ವರ್ಷದ ಪೂಜೆ ಪೂರೈಸುತ್ತಾನಾ ಅಥ್ವಾ ಇಲ್ವಾ..? ಆ ಮಧ್ಯೆ ಏನೆಲ್ಲಾ ನಡೆಯುತ್ತೆ ಅನ್ನೋದೇ ಚಿತ್ರದ ಕಥಾವಸ್ತು.

ಡೊಳ್ಳು ಆರ್ಟಿಸ್ಟ್ ಪರ್ಫಾಮೆನ್ಸ್

ನಾಯಕನಟ ರುದ್ರನ ಪಾತ್ರದಲ್ಲಿ ಕಾರ್ತಿಕ್ ಮಹೇಶ್ ಮನೋಜ್ಞ ಅಭಿನಯ ನೀಡಿದ್ದಾರೆ. ಸಿನಿಮಾಗಾಗಿ ಡೊಳ್ಳು ಕುಣಿತ ಕಲೆಯನ್ನ ಕರಗತ ಮಾಡಿಕೊಂಡು, ನುರಿತ ಕಲಾವಿದನಂತೆ ಕಾಣಸಿಗುತ್ತಾರೆ. ಇನ್ನು ಲಚ್ಚಿ ಪಾತ್ರದಲ್ಲಿ ರುದ್ರನ ತಂಗಿಯಾಗಿ ಶರಣ್ಯಾ ಹಾಗೂ ನಾಯಕಿ ಪ್ರಿಯಾ ಪಾತ್ರದಲ್ಲಿ ನಿಧಿ ಹೆಗ್ಡೆ ಚಿತ್ರಕ್ಕೆ ಹೊಸ ಆಯಾಮ ಕೊಡುವಂತೆ ಸ್ವಾಭಾವಿಕವಾಗಿ ನಟಿಸಿದ್ದಾರೆ.

ಹೀರೋ ತಂದೆ ಕಾಳಪ್ಪನಾಗಿ ಚಂದ್ರ ಮಯೂರ್ ಬಹಳ ತೂಕವಾದ ಪಾತ್ರ ಪೋಷಿಸಿದ್ದಾರೆ. ಇನ್ನು ಪುರೋಹಿತರಾಗಿ ಬಾಬು ಹಿರಣ್ಣವ್ವ, ನಾಯಕನಟನ ಸ್ನೇಹಿತರ ಪಾತ್ರಗಳು ಸೇರಿದಂತೆ ಎಲ್ಲರೂ ಅವರವರ ಪಾತ್ರಗಳಿಗೆ ಜೀವ ಭೇಷ್ ಅನಿಸಿಕೊಂಡಿದ್ದಾರೆ.

ಡೊಳ್ಳು ಚಿತ್ರದ ಪ್ಲಸ್ ಪಾಯಿಂಟ್ಸ್

  • ಸಾಗರ್ ಪುರಾಣಿಕ್ ಕಥೆ, ಚಿತ್ರಕಥೆ, ನಿರ್ದೇಶನ & ನಿರೂಪಣೆ
  • ಕಾರ್ತಿಕ್ ಮಹೇಶ್, ಚಂದ್ರ ಮಯೂರ್, ಶರಣ್ಯ, ನಿಧಿ ನಟನೆ
  • ಡೊಳ್ಳು ಕುಣಿತ ಕಲೆಯ ಉಳಿವಿಗಾಗಿ ನಡೆಯೋ ತೊಳಲಾಟ
  • ಹಿತವಾದ ಸಂಗೀತ, ಹದವಾದ ಸಂಭಾಷಣೆ
  • ಅನಿರೀಕ್ಷಿತ ಕ್ಲೈಮ್ಯಾಕ್ಸ್
  • ಬೆಲೆ ಕಟ್ಟಲಾಗದ ಕಲೆಯ ಮಹತ್ವ

ಡೊಳ್ಳು ಚಿತ್ರಕ್ಕೆ ಪವರ್ ಟಿವಿ ರೇಟಿಂಗ್: 4.5/5

ಡೊಳ್ಳು ಫೈನಲ್ ಸ್ಟೇಟ್​ಮೆಂಟ

ಸಾಗರ್ ಪುರಾಣಿಕ್ ಅನ್ನೋ ಯಂಗ್ ಡೈರೆಕ್ಟರ್ ಸಣ್ಣ ವಯಸ್ಸಿನಲ್ಲೇ ಇಂಥದ್ದೊಂದು ಅಪರೂಪದ ಕಲೆಯನ್ನ ಆರಾಧಿಸೋ ಸಿನಿಮಾಗೆ ಕೈ ಹಾಕಿರೋದೇ ಇಂಟರೆಸ್ಟಿಂಗ್. ಹೊಸ ಪ್ರತಿಭೆಗಳನ್ನ ಇಟ್ಕೊಂಡು ಬೆಲೆಕಟ್ಟಲಾಗದ ಕಲೆಯ ಆಳ, ಅಗಲವನ್ನು ಸಂಶೋಧನೆ ಮಾಡಿ, ಅದಕ್ಕೊಂದು ರೂಪ ಕೊಡೋದ್ರಲ್ಲಿ ಯಶಸ್ವಿ ಆಗಿದ್ದಾರೆ ಸಾಗರ್. ಇಲ್ಲಿ ಡೊಳ್ಳು ಕುಣಿತದ ಕಲೆಯ ಜೊತೆ, ಕಲೆಗೆ ಸಿಗದ ಬೆಲೆ, ಅದ್ರಿಂದ ಜೀವನದ ಬಂಡಿ ಸಾಗಲ್ಲ ಅನ್ನೋ ನಗ್ನ ಸತ್ಯ, ಹಳ್ಳಿಯ ಮಹತ್ವ, ಸಿಟಿ ಲೈಫ್, ಹಣದ ಅವಶ್ಯಕತೆ & ವ್ಯಾಮೋಹ ಸೇರಿದಂತೆಗೆ ಎಲ್ಲವನ್ನೂ ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. ಇನ್ನು ಇಂತಹ ಕಲೆಯನ್ನ ಪೋಷಿಸೋ ನಿಟ್ಟಿನಲ್ಲಿ ಕಮರ್ಷಿಯಲ್ ಚಿತ್ರಗಳ ನಿರ್ದೇಶಕರೂ, ಕಲಾವಿದರೂ ಆದಂತಹ ಪವನ್ ಒಡೆಯರ್ ಹಾಗೂ ಅವ್ರ ಪತ್ನಿ ಅಪೇಕ್ಷಾ ಪುರೋಹಿತ್ ಮುಂದೆ ಬಂದು ಬಂಡವಾಳ ಹೂಡಿರೋದು ನಿಜಕ್ಕೂ ಗಮನಾರ್ಹ. ಮಕ್ಕಳಿಂದ ಮುದುಕರವರೆಗೆ ಎಲ್ಲರೂ ನೋಡಬೇಕಾದ ಸಿನಿಮಾ ಇದಾಗಿದ್ದು, ಶಿವಪ್ಪನ ಅಚ್ಚು ಮೆಚ್ಚಿನ ಡೊಳ್ಳು ಕುಣಿತ ಶಾಶ್ವತವಾಗಿ ಉಳಿದುಕೊಂಡರೆ ಅದಕ್ಕಿಂತ ಸಾರ್ಥಕತೆ ಮತ್ತೊಂದು ಇರಲಾರದು. ವೀರಭದ್ರ ಮೆಚ್ಚುವಂತಹ ರುದ್ರನ ಡೊಳ್ಳು ಕುಣಿತವನ್ನು ಥಿಯೇಟರ್​ನಲ್ಲೇ ತಪ್ಪದೇ ಕಣ್ತುಂಬಿಕೊಳ್ಳಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

Most Popular

Recent Comments