ಬೆಂಗಳೂರು: ಬಿಜೆಪಿಯ ಕೇಂದ್ರೀಯ ಸಂಸತ್ ಮಂಡಳಿ ಹಾಗೂ ಕೇಂದ್ರೀಯ ಚುನಾವಣೆ ಸಮಿತಿಗೆ ಆಯ್ಕೆ ಮಾಡುವ ಮೂಲಕ ಬಹಳ ದೊಡ್ಡ ಜವಾಬ್ದಾರಿಯನ್ನ ನಮ್ಮ ಹೈಕಮಾಂಡ್ ನೀಡಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಂದು ರಾಷ್ಟ್ರೀಯ ಬಿಜೆಪಿ 11 ಜನರನ್ನ ಒಳಗೊಂಡಂತೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯ ಪುನರ್ ರಚನೆ ಮಂಡಳಿಯಲ್ಲಿ ಬಿ.ಎಸ್.ಯಡಿಯೂರಪ್ಪಗೆ ಸ್ಥಾನ ನೀಡಿ ರಾಷ್ಟ್ರೀಯ ಬಿಜೆಪಿ ಆದೇಶಿಸಿತ್ತು. ಬಿಜೆಪಿಯಲ್ಲಿ ಚುನಾವಣೆ, ಟಿಕೆಟ್ ಹಂಚಿಕೆ, ನೀತಿ ತೀರ್ಮಾನ ಕೈಗೊಳ್ಳುವ ಉನ್ನತ ಸಮಿತಿಯೇ ಬಿಜೆಪಿ ಸಂಸದೀಯ ಮಂಡಳಿಯಾಗಿದೆ.
ಈ ಬಗ್ಗೆ ಇಂದು ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಎಸ್ವೈ, ನಾನು ಯಾವುದೇ ಸ್ಥಾನಮಾನಕ್ಕೆ ಅಸೆಪಟ್ಟವನಲ್ಲ. ರಾಷ್ಟ್ರೀಯ ನಾಯಕರು ಸಾಮಾನ್ಯ ಕಾರ್ಯಕರ್ತರನ್ನ ಗುರಿಸುತ್ತಾರೆ ಅನ್ನೋದಕ್ಕೆ ನಾನೇ ಉದಾಹರಣೆ. ಯಾವತ್ತೂ ಸಹ ಯಾವುದೇ ಸ್ಥಾನ ಮಾನ ನೀರಿಕ್ಷೆ ಮಾಡಿರಲಿಲ್ಲ. ಯಾವುದೇ ಸ್ಥಾನಮಾನ ಅಪೇಕ್ಷೆಪಟ್ಟವನಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಒಂದು ಸಂಕಲ್ಪ ಇತ್ತು.
ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬ ಸಂಕಲ್ಪ ಇತ್ತು. ಪ್ರಧಾನಿ ಮೋದಿಯವರ ಜೊತೆ ಮಾತನಾಡುವಾಗ ನೀವು ದಕ್ಷಿಣ ಭಾರತದ ಕಡೆ ಕೂಡ ಗಮನ ಕೊಡಬೇಕು ಎಂದು ಮೋದಿಜಿ ಹೇಳಿದ್ದಾರೆ. ನನ್ನನ್ನು ಸದಸ್ಯರನ್ನಾಗಿ ಮಾಡಿದ್ದಕ್ಕೆ ಸಂತೋಷವಿದೆ. ರಾಜ್ಯದ ಸುತ್ತಾ ಓಡಾಟ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದು. ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆ ಮಾಡಬೇಕೆಂಬ ಆಸೆ ಮೋದಿ, ನಡ್ಡಾಜಿ ಅವ್ರಿಗೆ ಇದೆ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರವನ್ನ ಅಧಿಕಾರ ತರುವ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತೀನಿ. ರಾಜಕೀಯ ಬದುಕು ಮತ್ತು ಸಾರ್ವಜನಿಕ ಬದುಕಿನಿಂದ ನಿವೃತ್ತಿ ಎಂದು ಭಾವಿಸಿಲ್ಲ. ಕರ್ನಾಟಕದಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ದಕ್ಷಿಣ ಭಾರತದಲ್ಲೂ ಕೂಡ ಎಲ್ಲೆಲ್ಲಿ ಸಾಧ್ಯವಿದ್ಯೋ ಅಲ್ಲೆಲ್ಲ ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡ್ತೀನಿ ಎಂದು ಯಡಿಯೂರಪ್ಪ ಹೇಳಿದ್ದಾರೆ.