ಹಾಸನ: ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರೆದಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳನ್ನು ಹಾಳುಮಾಡುತ್ತಿವೆ. ಅದೆಷ್ಟು ಬಾರಿ ಹೇಳಿದರು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚತ್ತು ಕೊಳ್ಳದ ಕಾರಣ ಅಧಿಕಾರಿಗಳನ್ನು ಗ್ರಾಮಸ್ಥರು ಕೂಡಿಹಾಕಿದ ಘಟನೆ ಇಂದು ನಡೆದಿದೆ.
ನಿತ್ಯವೂ ಕಾಡಾನೆಗಳು ಹಿಂಡು ಹಿಂಡಾಗಿ ಬಂದು ಗದ್ದೆಗಳ ಬೆಳೆ ಹಾಳು ಮಾಡುತ್ತಿವೆ. ಗ್ರಾಮಗಳಲ್ಲಿ ಓಡಾಡುತ್ತಿದ್ದು, ಜನರು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅಂತಾ ಆರೋಪಿಸಿ ಅರಣ್ಯ ಇಲಾಖೆಯ ನೌಕರರನ್ನ ಗ್ರಾಮಪಂಚಾಯತ್ ನಲ್ಲಿ ಕೂಡಿಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಸಕಲೇಶಪುರ, ಬೇಲೂರು ಹಾಗೂ ಆಲೂರು ತಾಲೂಕಿನಲ್ಲಿ ಕಾಡಾನೆಗಳ ದಾಳಿ ಮಾಡಿದ್ದು, ಕಾಡಾನೆಗಳು ದಾಳಿ ಮಾಡುತ್ತಲೇ ಇವೆ. ಕಾಫಿ, ಭತ್ತ, ತೆಂಗು, ಮೆಣಸು, ಅಡಿಕೆ ಸೇರಿದಂತೆ ಹತ್ತಾರು ಬೆಳೆಗಳನ್ನ ತುಳಿದು ನಾಶಮಾಡಿದೆ. ಕಾಡಾನೆಗಳನ್ನ ಬೇರೆಡೆಗೆ ಸ್ಥಳಾಂತರಿಸುವಂತೆ ಸರ್ಕಾರಕ್ಕೆ ಎಷ್ಟೇ ಒತ್ತಾಯ ಮಾಡಿದರೂ ಕೂಡಾ ಯಾವುದೇ ಪ್ರಯೋಜವಾಗ್ತಿಲ್ಲ ಅಂತ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಚಿದಾನಂದ್ ಮಾತಾನಾಡಿ, ನಮ್ಮ ಗ್ರಾಮದ ಸುತ್ತಮುತ್ತ 50 ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ, ನಮ್ಮ ಹಿರಿಯರ ಕಾಲದಿಂದಲೂ ನಾವು ಇಲ್ಲಿ ಬದುಕು ನಡೆಸುತ್ತಿದ್ದೇವೆ, ನಮ್ಮ ಭಾಗದಲ್ಲಿ ನೂರಾರು ಎಕರೆಯಲ್ಲಿ ಬೆಳೆದ ಬೆಳೆಯೆಲ್ಲವನ್ನೂ ಸಂಪೂರ್ಣವಾಗಿ ಹಾಳು ಮಾಡುತ್ತಿವೆ, 40 ವರ್ಷದಿಂದ ನಮ್ಮಮಕ್ಕಳ ಹಾಗೆ ಕಾಫಿ ಗಿಡಗಳನ್ನ ಬೆಳೆಸಿದ್ದೆವು, ಇದೀಗ ಕಾಡಾನೆಗಳು ಬಂದು ಸಂಪೂರ್ಣ ನೆಲಸಮ ಮಾಡಿವೆ, ಅರಣ್ಯ ಇಲಾಖೆಯವರೂ ಅದಕ್ಕೆ ತಕ್ಕ ಪರಿಹಾರ ಕೊಡೋದಿಲ್ಲ, ಅದೂ ಯಾವಾಗ್ಲೂ ಐದೋ ಹತ್ತೋ ಸಾವಿರ ಬಿಕ್ಷೆ ಕೊಟ್ಟಹಾಗೆ ಕೊಡ್ತಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.