ಬೆಂಗಳೂರು : ಇಂದು ನಿಮ್ಮನ್ನೆಲ್ಲ ನೋಡಿದ ಮೇಲೆ ನನ್ನ ವಯಸ್ಸು 25 ವರ್ಷ ಕಡಿಮೆಯಾಗಿದೆ. ನಿಮ್ಮನ್ನ ನೋಡ್ತಿದ್ರೆ ನನಗೂ ಕೆಳಗೆ ನಿಂತು ಧ್ವಜ ಹಾರಿಸಬೇಕು ಅನ್ನಿಸುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು 75ನೇ ಸ್ವಾತಂತ್ರ್ಯ ಉದ್ಫಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನೀವೆಲ್ಲರು ಭಾರತದ ಭವಿಷ್ಯ. 75 ವರ್ಷ ಒಬ್ಬ ವಯಸ್ಸಿಗೆ ವೃದ್ದನ ವಯಸ್ಸು. ಆದ್ರೆ ಭಾರತಕ್ಕೆ 75 ವರ್ಷ ತುಂಬಾ ಚಿಕ್ಕದು,ಭಾರತಕ್ಕೆ ಯವ್ವನದ ವಯಸ್ಸು. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಯುವಕರು ಇರೋದು ಭಾರತದಲ್ಲಿ ನಮ್ಮ ದೇಶ ಯುವಕರ ದೇಶ. ಕನ್ನಡನಾಡಿನಲ್ಲಿ ಸರ್ಕಾರದ ವತಿಯಿಂದ 1 ಕೋಟಿ 8 ಲಕ್ಷ ಧ್ವಜ ಕೊಟ್ಟಿದ್ದೇವೆ. ಜನ ಸ್ವಪ್ರೇರಣೆಯಿಂದ ಅವ್ರೆ ಧ್ವಜ ತೆಗೆದುಕೊಂಡು ಧ್ವಜಾರೋಹಣ ಮಾಡ್ತಿದ್ದಾರೆ ಎಂದರು.
ಇಂದು 1.25 ಲಕ್ಷ ಧ್ವಜ ರಾಜ್ಯದಲ್ಲಿ ಹಾರುತ್ತಿದೆ. ಪ್ರತಿ ಹಳ್ಳಿ, ಪ್ರತಿ ಮನೆಯಲ್ಲೂ ಧ್ವಜ ಹಾರುತ್ತಿದೆ. ಸ್ವಾತಂತ್ರ್ಯ ಸುಮ್ಮನೆ ಬಂದಿಲ್ಲ. ಅನೇಕರ ತ್ಯಾಗ,ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಸಾಕಷ್ಟು ಜನ ಪ್ರಾಣತ್ಯಾಗ ಮಾಡಿದ್ದಾರೆ,ಅವರ ಹೆಸರು ಎಲ್ಲೂ ದಾಖಲಾಗಿಲ್ಲ. ಸ್ವಾತಂತ್ರ್ಯ ಎಲ್ಲರ ಹಕ್ಕು. ರೈತರು, ಕೂಲಿಕಾರರು, ಎಲ್ಲರೂ ಸೇರಿ ಸ್ವಾತಂತ್ರ್ಯ ತಂದಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ 200 ವರ್ಷಗಳ ಇತಿಹಾಸವಿದೆ. ಮೊದಲು ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದು ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ದೇಶಕ್ಕೆ 75 ವರ್ಷ ಇದ್ದಾಗ ನಮಗೆ ಪ್ರಧಾನಿ ಮೋದಿ ಸಿಕ್ಕಿದ್ದಾರೆ. ಸಶಕ್ತ ಭಾರತ,ಸಂಪದ್ಭರಿತ ಭಾರತ ನಿರ್ಮಾಣ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅದಲ್ಲದೆ, 2047 ಕ್ಕೆ ಭಾರತಕ್ಕೆ 100 ವರ್ಷ ತುಂಬಲಿದೆ. ಇನ್ನುಳಿದ 25 ವರ್ಷ ದೇಶದ ಅಮೃತಕಾಲ ಎಂದು ಮೋದಿ ಹೇಳಿದ್ದಾರೆ. ಭವ್ಯ ಭಾರತ ಕಟ್ಟಲು ನಾವೆಲ್ಲ ಸಂಕಲ್ಪ ಮಾಡೋಣ. ದೇಶ ಮೊದಲು,ದೇಶದ ಕೆಳಗೆ ನಾವೆಲ್ಲ ಒಟ್ಟಾಗಿ ನಿಲ್ಲಬೇಕು. ದೇಶಕ್ಕಾಗಿ ಪ್ರಾಣ ಕೊಡುವ ಅವಶ್ಯಕತೆ ಇಲ್ಲ,ದೇಶಕ್ಕಾಗಿ ಬದುಕಬೇಕು. ದೇಶಕ್ಕಾಗಿ ರಕ್ತ ಕೊಡಬೇಕಿಲ್ಲ,ದೇಶಕ್ಕಾಗಿ ನಿಮ್ಮ ಬೆವರಿನ ಹನಿ ಕೊಡಬೇಕು. ಮುಂದಿನ 25 ವರ್ಷ ನೀವು ಇದಕ್ಕೆ ಉತ್ತರ ಕೊಡಬೇಕು. ಯುವಕರು ದೇಶದ ಶಕ್ತಿ, ನಂಬಿಕೆ. ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡೋಣ. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಮಾಡ್ತೀವಿ ಅಂತ ಮೋದಿ ಹೇಳಿದ್ದಾರೆ. ಕರ್ನಾಟಕದಿಂದ ಒಂದು ಟ್ರಿಲಿಯನ್ ಆರ್ಥಿಕತೆಯನ್ನು ನಾವು ನೀಡುತ್ತೇವೆ. ಇದು ನಮ್ಮ ಧ್ಯೇಯ,ನಮ್ಮ ಪ್ರತಿಜ್ಞೆ ಎಂದು ಹೇಳಿದರು.