Monday, November 18, 2024

ಚಿನ್ನದ ಪದಕ ಗೆದ್ದು ಹೊಸ ದಾಖಲೆ ನಿರ್ಮಿಸಿದ ಪಿವಿ ಸಿಂಧು

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮಹಿಳಾ ಸಿಂಗಲ್ಸ್​ ಬ್ಯಾಡ್ಮಿಂಟನ್​ ಫೈನಲ್​ನಲ್ಲಿ ಕೆನಡಾದ ಮಿಶೆಲ್​​ಲಿ ಅವರನ್ನು 21-15, 21-13 ನೇರ ಸೆಟ್​ಗಳಿಂದ ಸೋಲಿಸುವ ಮೂಲಕ ಸಿಂಧು ಸ್ವರ್ಣ ಪದಕಕ್ಕೆ ಕೊರೊಳೊಡ್ಡಿದ್ದರು. ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಒಟ್ಟಾರೆ ಚಿನ್ನದ ಪದಕದ ಸಂಖ್ಯೆಯನ್ನು 19ಕ್ಕೆ ಏರಿಸಿದರು.

ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದ ಮೊದಲ ಸೆಟ್ ಅನ್ನು ಪಿವಿ ಸಿಂಧು 21-15 ಅಂತರದಿಂದ ಗೆದ್ದುಕೊಂಡರು. ಇನ್ನು 2ನೇ ಸೆಟ್​ನಲ್ಲಿ ಆರಂಭದಲ್ಲೇ 6-3 ಅಂತರದಿಂದ ಮುನ್ನಡೆ ಕಾಯ್ದುಕೊಂಡ ಭಾರತೀಯ ಆಟಗಾರ್ತಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅಷ್ಟೇ ಅಲ್ಲದೆ ಮಿಶೆಲ್ 6 ಪಾಯಿಂಟ್ ಕಲೆಹಾಕುವ ವೇಳೆಗೆ ಸಿಂಧು 12 ಪಾಯಿಂಟ್ ಗಳಿಸಿದ್ದರು. ಆದರೆ ಇದಾದ ಬಳಿಕ ಕಂಬ್ಯಾಕ್ ಮಾಡಿದ ಕೆನಡಾ ಆಟಗಾರ್ತಿ ಬ್ಯಾಕ್ ಟು ಬ್ಯಾಕ್ ಪಾಯಿಂಟ್ ಗಳಿಸಿ ಅಂತರವನ್ನು 15-11 ಕ್ಕೆ ತಂದು ನಿಲ್ಲಿಸಿದರು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡುವ ಮೂಲಕ ತಮ್ಮ ಅನುಭವವನ್ನು ತೆರೆದಿಟ್ಟ ಪಿವಿ ಸಿಂಧು ಎದುರಾಳಿ ಮೇಲೆ ಒತ್ತಡ ಹೆಚ್ಚಿಸಿದರು. ಅಲ್ಲದೆ 21 – 13 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು 2014 ಮತ್ತು 2018 ರ ಕಾಮನ್​ವೆಲ್ತ್​ ಆವೃತ್ತಿಗಳಲ್ಲಿ ಕಂಚು ಮತ್ತು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಇದೀಗ ಚಿನ್ನದ ಪದಕ ಗೆಲ್ಲುವ ಮೂಲಕ ಕಾಮನ್​ವೆಲ್ತ್ ಗೇಮ್ಸ್​ನಲ್ಲಿ ಭಾರತಕ್ಕಾಗಿ ಮೂರು ವಿಭಿನ್ನ ಪದಕಗಳನ್ನು ಗೆದ್ದ ಐತಿಹಾಸಿಕ ಸಾಧನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES