ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ. ಆದ್ರೆ ಅವ್ರ ಮನೋಜ್ಞ ಅಭಿನಯ & ಮಾಡಿದ ಪಾತ್ರಗಳಿಗೆ ಸಂದ ಪ್ರಶಸ್ತಿಗಳು ಸದಾ ಜೀವಂತ. ಕನ್ನಡ ಚಿತ್ರರಂಗದಲ್ಲಿ ಯಾರೂ ಮಾಡದಂತಹ ರೆಕಾರ್ಡ್ ಬ್ರೇಕ್ ಮಾಡಿರೋ ವಿಜಯ್ ದಿಗ್ವಿಜಯ ಸತ್ತ ಮೇಲೂ ಮುಂದುವರೆದಿದೆ. ಅದೇನು ಅನ್ನೋದ್ರ ಜೊತೆಗೆ 2020ನೇ ಸಾಲಿನ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಯಾಱರ ಮುಡಿಗೆ ಅನ್ನೋದ್ರ ಡಿಟೈಲ್ಡ್ ಸ್ಟೋರಿ ನಿಮಗಾಗಿ.
ಕನ್ನಡಕ್ಕೆ ನಾಲ್ಕು ಪ್ರಶಸ್ತಿ.. ತುಳುಗೆ ಒಂದು ಪ್ರಶಸ್ತಿಯ ಗರಿ
ಕನ್ನಡಿಗ ಗೋಪಿನಾಥ್ ಚಿತ್ರಕ್ಕೆ ಸಾಲು ಸಾಲು ಅವಾರ್ಡ್ಸ್
68ನೇ ನ್ಯಾಷನಲ್ ಅವಾರ್ಡ್ಸ್ನಲ್ಲಿ ವಿಜಯ್ ದಿಗ್ವಿಜಯ
ಕನ್ನಡ ಇಂಡಸ್ಟ್ರಿಯಲ್ಲಿ ಸಂಚಾರಿ ವಿಜಯ್ ನ್ಯೂ ರೆಕಾರ್ಡ್
ಪ್ರತೀ ವರ್ಷದಂತೆ ಕೇಂದ್ರ ಸರ್ಕಾರ ಈ ವರ್ಷವೂ ರಾಷ್ಟ್ರ ಪ್ರಶಸ್ತಿ ಪಟ್ಟಿಯನ್ನು ಪ್ರಕಟ ಮಾಡಿದೆ. ಕನ್ನಡಕ್ಕೆ ಬರೋಬ್ಬರಿ ನಾಲ್ಕು ಪ್ರಶಸ್ತಿಗಳು ಲಭಿಸಿದ್ದು, ಕರಾವಳಿಯ ತುಳು ಸಿನಿಮಾಗೂ ಪ್ರಶಸ್ತಿ ದೊರೆತಿರೋದು ಖುಷಿಯ ವಿಚಾರ. ಪವನ್ ಒಡೆಯರ್ & ಅಪೇಕ್ಷಾ ಪವನ್ ಒಡೆಯರ್ ನಿರ್ಮಾಣದ ಹಾಗೂ ಸಾಗರ್ ಪುರಾಣಿಕ್ ನಿರ್ದೇಶನದ ಡೊಳ್ಳು ಎರಡೆರಡು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅತ್ಯುತ್ತಮ ಕನ್ನಡ ಸಿನಿಮಾ ಹಾಗೂ ಅತ್ಯುತ್ತಮ ಆಡಿಯೋಗ್ರಫಿ ಅಂದ್ರೆ ಸಿಂಕ್ ಸೌಂಡ್ಗಾಗಿ ಪ್ರಶಸ್ತಿ ಪಡೆದಿದೆ. ಈ ಸಿನಿಮಾ ಸದ್ಯದಲ್ಲೇ ಥಿಯೇಟರ್ಗೆ ಬರಲಿದ್ದು, ಪವರ್ ಟಿವಿ ಜೊತೆ ಖುಷಿ ಹಂಚಿಕೊಂಡಿದ್ದಾರೆ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್.
ಇನ್ನು ದಿವಂಗತ ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಎಲ್ಲರ ಗಮನ ಸೆಳೆದಿದೆ. ಅತ್ಯತ್ತಮ ಪರಿಸರ ಕಾಳಜಿ ಸಿನಿಮಾ ವಿಭಾಗದಲ್ಲಿ ಪ್ರವೀಣ್ ಕೃಪಾಕರ್ ನಿರ್ದೇಶನದ ತಲೆದಂಡಕ್ಕೆ ಪ್ರಶಸ್ತಿ ಲಭಿಸಿದೆ. ಬಹುಶಃ ಇಂದು ಸಂಚಾರಿ ವಿಜಯ್ ಇದ್ದಿದ್ರೆ ಅದೆಷ್ಟು ಖುಷಿ ಪಡ್ತಿದ್ರೋ ಏನೋ..? ಆದ್ರೆ ಅಂತಹ ಮನೋಜ್ಞ ಕಲಾವಿದನನ್ನ ಪಡೆದಿದ್ದ ನಮ್ಮ ಕನ್ನಡ ಇಂಡಸ್ಟ್ರಿ ನಿಜಕ್ಕೂ ಧನ್ಯ.
ಇಲ್ಲಿಯವರೆಗೆ ಸಂಚಾರಿ ವಿಜಯ್ ನಟಿಸಿರೋ ಬರೋಬ್ಬರಿ ನಾಲ್ಕು ಸಿನಿಮಾಗಳು ರಾಷ್ಟ್ರ ಪ್ರಶಸ್ತಿ ಪಡೆದಿವೆ. ಅವು ‘ನಾನು ಅವನಲ್ಲ ಅವಳು, ಹರಿವು, ನಾತಿ ಚರಾಮಿ ಹಾಗೂ ತಲೆದಂಡ’ ಚಿತ್ರಗಳು. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಹೀಗೆ ಬೇರಾವ ನಟನೂ ಮಾಡದಿರೋ ನೂತನ ದಾಖಲೆ ಬರೆದಿರೋದು, ಸಂಚಾರಿ ವಿಜಯ್ ಅಂತಹ ಶ್ರೇಷ್ಠ ನಟನ ಅಭಿನಯ ಚತುರತೆಯನ್ನ ಎತ್ತಿ ಹಿಡಿದಂತಿದೆ.
ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ ಡಾ. ಪಿಟಿ ವೆಂಕಟೇಶ್ ಕುಮಾರ್’ ಅನ್ನೋ ಡಾಕ್ಯುಮೆಂಟರಿ ಪ್ರಶಸ್ತಿಯನ್ನು ದೋಚಿದೆ. ಅತ್ಯುತ್ತಮ ಕಲಾ ಹಾಗೂ ಸಂಸ್ಕೃತಿ ವಿಭಾಗದಲ್ಲಿ ಈ ಡಾಕ್ಯುಮೆಂಟರಿಗೆ ಅವಾರ್ಡ್ ಬಂದಿರೋದು ವಿಶೇಷ. ಇನ್ನು ಇವಲ್ಲದೆ ಕನ್ನಡದ ಉಪಭಾಷೆ ತುಳು ಸಿನಿಮಾಗೂ ಪ್ರಶಸ್ತಿ ಬಂದಿದೆ. ಸಂತೋಷ್ ಮಾದ ಌಕ್ಷನ್ ಕಟ್ ಹೇಳಿರೋ ಹಾಗೂ ಅರುಣ್ ರೈ ತೋಡಾರ್ ನಿರ್ಮಾಣದ ಜೀಟಿಗೆ ಚಿತ್ರ, ಅತ್ಯುತ್ತಮ ತುಳು ಸಿನಿಮಾ ಆಗಿ ಹೊರಹೊಮ್ಮಿದೆ.
ಅತ್ಯುತ್ತಮ ಚಿತ್ರಕಥೆ, ನಟ ಹಾಗೂ ನಟಿ ಹೀಗೆ ಮೂರೂ ವಿಭಾಗಗಳಲ್ಲಿ ತಮಿಳಿನ ಸೂರರೈ ಪೋಟ್ರು ಸಿನಿಮಾ ಪ್ರಶಸ್ತಿಗಳನ್ನ ಬಾಚಿಕೊಂಡಿದೆ. ಸುಧಾ ಕೊಂಗಾರ ನಿರ್ದೇಶನದ ಈ ಸಿನಿಮಾದಲ್ಲಿ ನಟ ಸೂರ್ಯ ಹಾಗೂ ನಟಿ ಅಪರ್ಣಾ ಬಾಲಮುರಳಿ ನಟಿಸಿದ್ರು. ಸೂರರೈ ಪೋಟ್ರು ನಮ್ಮ ಹಾಸನದ ಬಳಿ ಗೊರೂರು ಮೂಲದ ಕ್ಯಾಪ್ಟನ್ ಗೋಪಿನಾಥ್ ಕುರಿತ ಸಿನಿಮಾ. ಇದು ನಿಜಕ್ಕೂ ಕನ್ನಡಿಗರಾದ ನಾವು ಹೆಮ್ಮೆ ಪಡೋ ವಿಷಯ. ವಿಶೇಷ ಅಂದ್ರೆ ಅತ್ಯುತ್ತಮ ನಟ ಪ್ರಶಸ್ತಿಯನ್ನ ಸೂರ್ಯ ಜೊತೆ ತಾನ್ಹಾಜಿ ಸಿನಿಮಾಗಾಗಿ ಅಜಯ್ ದೇವಗನ್ ಕೂಡ ಪಡೆದಿದ್ದಾರೆ.
ಅಲ್ಲು ಅರ್ಜುನ್ರ ಅಲಾ ವೈಕುಂಠಪುರಮುಲೋ ಸಿನಿಮಾದ ಸಂಗೀತ ಸಂಯೋಜನೆಗಾಗಿ ಎಸ್ ತಮನ್ಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಒಟ್ಟಾರೆ ಸೌತ್ನಿಂದ ಕೂಡ ಸಾಕಷ್ಟು ಚಿತ್ರಗಳು ಅವಾರ್ಡ್ ರೇಸ್ನಲ್ಲಿದ್ದವು. ಆದ್ರೆ ಅದೃಷ್ಠವಂತರು ಮಾತ್ರ ಪ್ರಶಸ್ತಿಗೆ ಭಾಜನರಾಗಿದ್ದು, ಇದು ಅವ್ರ ಜವಾಬ್ದಾರಿಗಳನ್ನು ಹೆಚ್ಚಿಸಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ