ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಎದುರಾದ ಪ್ರವಾಹದಿಂದಾಗಿ ನದಿ ತೀರದ ಮಂದಿ ಕೃಷಿ ಕಾರ್ಯ ಮಾಡಲಾಗದೆ ಸರ್ವಸ್ವವನ್ನೆ ಕಳೆದುಕೊಂಡಿದ್ದಾರೆ. ನೆರೆಯಿಂದಾಗಿ ಕೃಷಿ ಬೆಳೆಗಳು ಮುಳುಗಡೆಯಾಗಿದ್ದವು.ನಾಟಿ ಮಾಡಿದ ಗದ್ದೆಗಳಲ್ಲಿ ಕೆಸರು ತುಂಬಿಕೊಂಡು ಬೆಳೆ ನಾಶವಾಗಿತ್ತು..ಆದ್ರೆ, ಇದೀಗ ಖಾರ್ಗಾ, ವೈಲವಾಡ ಸೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯುವ ಸಮೂಹವೊಂದು ಭತ್ತ ಬೆಳೆಯಲು ವಿಭಿನ್ನ ಯೋಚನೆ ಮಾಡಿದೆ.ಕಾಂಕ್ರೀಟ್ ಮಹಡಿ ಮೇಲೆಯೇ ಬೆಳೆ ಬೆಳೆಯುತ್ತಿದ್ದಾರೆ.
ಪ್ರತಿ ವರ್ಷವೂ ನೆರೆ ಬರುತ್ತಿದ್ದ ಕಾರಣ ಭತ್ತದ ಗದ್ದೆ ನೀರು ಪಾಲಾಗುತ್ತಿತ್ತು. ಸಸಿಗಳಿಲ್ಲದೇ ಭತ್ತ ನಾಟಿ ಮಾಡಲು ಅಸಾಧ್ಯವಾಗ್ತಿತ್ತು. ಆದರೆ, ಹೊಸ ಪ್ರಯೋಗದಿಂದ ಪಾಳು ಬಿಟ್ಟಿದ್ದ ಭೂಮಿಯಲ್ಲಿಯೂ ಸಸಿಗಳನ್ನು ನಾಟಿ ಮಾಡಲಾಗುತ್ತಿದೆ. ಕೇವಲ 15 ರಿಂದ 20 ದಿನಗಳಲ್ಲಿ ಸಸಿಯಾಗುವ ಕಾರಣ ಹೆಚ್ಚಿನ ಜನರು ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ.
ಉತ್ಸಾಹಿ ಯುವಕರ ಈ ಕಾರ್ಯದಿಂದ ಬಂಜರು ಬೀಳುತ್ತಿದ್ದ ಭೂಮಿಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳುವಂತಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಉದಯ್ ಬರ್ಗಿ ಪವರ್ ಟಿವಿ ಕಾರವಾರ