ಕೊಪ್ಪಳ : ಜಿಲ್ಲೆಯ ಗಂಗಾವತಿ ತಾಲೂಕಿನ ವೆಂಕಟಗಿರಿಯಲ್ಲಿ ಸರ್ಕಾರ ಕೋಟ್ಯಂತರ ರೂ.ಹಣ ವ್ಯಯಿಸಿ ಕೆರೆ ತುಂಬಿಸುವ ಯೋಜನೆ ಕೈಗೊಂಡಿದೆ. ಆದರೆ, ಗುತ್ತಿಗೆದಾರರು ಅನ್ನದಾತರ ಕಣ್ಣಿಗೆ ಮಣ್ಣೆರಚಿ ಅವೈಜ್ಞಾನಿಕ ಕಾಮಗಾರಿ ಕೈಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೆ, ಕಾಮಗಾರಿಗಳ ಕಾನೂನು ಪಾಲನೆ, ಅನ್ನದಾತರಿಗೆ ಸೂಕ್ತ ಪರಿಹಾರ ಹಣ ನೀಡದಿದ್ದಕ್ಕೆ ಕಾಮಗಾರಿ ನಿರ್ವಹಿಸುವ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ.
ಕೆರೆ ತುಂಬಿಸುವ ಯೋಜನೆ ನೆಪದಲ್ಲಿ ಗುತ್ತಿಗೆದಾರ ರಸ್ತೆ ಪಕ್ಕದಲ್ಲಿಯೇ ಪೈಪ್ಲೈನ್ ಕಾಮಗಾರಿ ಕೈಗೊಂಡಿದ್ದಾರೆ. ಇದರಿಂದ ರಸ್ತೆಯ ಅಗಲ ಕಡಿಮೆಯಾಗಿದ್ದು, ಅನೇಕರು ಅಪಘಾತಕ್ಕಿಡಾಗಿದ್ದಾರೆ. ಈ ಕಾರಣದಿಂದಲೇ ರಸ್ತೆಯನ್ನು ಅಗೆದು ಅದರಲ್ಲಿಯೇ ಪೈಪ್ಲೈನ್ ಕಾಮಗಾರಿ ಮಾಡಲಾಗುತ್ತಿದೆ. ಯೋಜನೆಗೆ ಸಂಬಂಧಪಟ್ಟ ಅಧಿಕಾರಿಗಳು ಸಹ ಗುತ್ತಿಗೆದಾರರೊಂದಿಗೆ ಕೈಜೋಡಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ತ ರೀತಿ ಕೆರೆ ತುಂಬಿಸುವ ಯೋಜನೆ ಕಾಮಗಾರಿ ನಡೆಯಬೇಕು. ರಸ್ತೆಯನ್ನು ಬೇಕಾಬಿಟ್ಟಿ ಅಗೆದಿರುವ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎನ್ನುವುದು ಜನರ ಒತ್ತಾಯವಾಗಿದೆ. ಜಿಲ್ಲಾಡಳಿತ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕಿದೆ.
ಶುಕ್ರಾಜ್ ಕುಮಾರ್, ಪವರ್ ಟಿವಿ, ಕೊಪ್ಪಳ