ಬೆಂಗಳೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದಾಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಅನುಮಾನ ಹುಟ್ಟಲಿಲ್ಲವೇಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಬಿ’ ರಿಪೋರ್ಟ್ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಮುಖ ಆರೋಪಿಯಾಗಿದ್ದರು.
ಸಾಕ್ಷ್ಯಾಧಾರಗಳ ಕೊರತೆಯಿಂದ ಈಶ್ವರಪ್ಪ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದೀಗ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಬಿಜೆಪಿ, ‘ಗುತ್ತಿಗೆದಾರ ಸಂತೋಷ್ ಪಾಟೀಲ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿರುವುದು ಕರ್ನಾಟಕ ಪೊಲೀಸರು. ಇದೇ ಪೊಲೀಸ್ ಇಲಾಖೆ ಸಿದ್ದರಾಮಯ್ಯ ಶಿಷ್ಯ ಕೆ.ಜೆ. ಜಾರ್ಜ್ ಅವರಿಗೆ ಕ್ಲೀನ್ ಚಿಟ್ ನೀಡಿದಾಗ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಏಕೆ ಅನುಮಾನದ ಭೂತ ಹುಟ್ಟಲಿಲ್ಲ ಎಂದು ಪ್ರಶ್ನಿಸಿದೆ.
‘ಕಾಂಗ್ರೆಸ್ ಸೃಷ್ಟಿಸಿರುವ ಕಮಿಷನ್ ಆರೋಪಗಳು ಸುಳ್ಳು ಎಂಬುದಕ್ಕೆ ಈಗ ನಿದರ್ಶನಗಳು ಸಿಗುತ್ತಿವೆ. ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕಾಂಗ್ರೆಸ್ ಪಕ್ಷದ ನಾಯಕರು ಸುತ್ತಿದ್ದ ಆರೋಪ ಮುಕ್ತವಾಗಿದೆ. ಶೇ. 40ರಷ್ಟು ಕಮೀಷನ್ ಆರೋಪವೂ ಇಂಥಹದೇ ಒಂದು ಮಿಥ್ಯೆ ಅಷ್ಟೇ’ ಬಿಜೆಪಿ ಗುಡುಗಿದೆ.
‘ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿದ ಬಳಿಕ ಅಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ ನೀಡಿದ್ದರು. ಆ ಪ್ರಕರಣದಲ್ಲಿ ಸಚಿವರಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಅಂದು ಸಿದ್ದರಾಮಯ್ಯ ಅವರಿಗೆ ಖಾಕಿ ಶುಭ್ರವಾಗಿ ಕಂಡಿತ್ತೇ’ ಎಂದು ಬಿಜೆಪಿ ಟೀಕಿಸಿದೆ.