ವರಮಹಾಲಕ್ಷ್ಮೀ ಹಬ್ಬಕ್ಕೆ ನವರಸಗಳ ರಸದೌತಣ ಉಣಬಡಿಸೋಕೆ ಸಜ್ಜಾಗಿದ್ದ ಹೊಂಬಾಳೆ ಫಿಲಂಸ್, ಇದೀಗ ಆ ಡೇಟ್ನ ಪೋಸ್ಟ್ಪೋನ್ ಮಾಡಿಕೊಂಡಿದೆ. ಜಗ್ಗೇಶ್ ಪಾಕಶಾಲೆಯಲ್ಲಿ ಏನೆಲ್ಲಾ ವೆರೈಟಿಗಳುಂಟು ಅನ್ನೋದ್ರ ಜೊತೆ ರಾಘವೇಂದ್ರ ಸ್ಟೋರ್ಸ್ ವಿಶೇಷತೆಗಳ ಝಲಕ್ ನಿಮ್ಮ ಮುಂದೆ.
ವರಮಹಾಲಕ್ಷ್ಮಿ ಹಬ್ಬಕ್ಕಿಲ್ಲ ಜಗ್ಗೇಶ್ ನವ ರಸದೌತಣ ಅಡುಗೆ
ಮಾನ್ಸೂನ್, ಪ್ರೊಮೋಷನ್ ಕೊರತೆಗೆ ಚಿತ್ರ ಪೋಸ್ಟ್ಪೋನ್
ನವೆಂಬರ್ಗೆ ಬೊಂಬಾಟ್ ಭೋಜನ ಬಡಿಸ್ತಾರಾ ಜಗ್ಗೇಶ್..?
ದಸರಾಗೆ ಫಿಕ್ಸ್ ಆಗಿದೆ ವಿಜಯ್ಪ್ರಸಾದ್- ಜಗ್ಗು ತೋತಾಪುರಿ
ಯುವರತ್ನ ಚಿತ್ರದ ಬಳಿಕ ಸಂತೋಷ್ ಆನಂದ್ರಾಮ್ ನಿರ್ದೇಶನದ ಸಿನಿಮಾ ರಾಘವೇಂದ್ರ ಸ್ಟೋರ್ಸ್. ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯ ಈ ಸಿನಿಮಾ ಹತ್ತು ಹಲವು ವಿಶೇಷತೆಗಳಿಂದ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಇದೇ ಮೊದಲ ಬಾರಿ ನಿರ್ದೇಶಕ ಸಂತೋಷ್ ಈ ಬಗೆಯ ಜಾನರ್ಗೆ ಕೈಹಾಕಿದ್ದು, ಔಟ್ ಅಂಡ್ ಔಟ್ ಕಾಮಿಡಿ ಎಂಟರ್ಟೈನರ್ ಆಗಿರಲಿದೆ.
ರಿಲೀಸ್ ಆಗಿರೋ ಟೀಸರ್ ಝಲಕ್ಗೆ ಎಲ್ರೂ ಫಿದಾ ಆಗಿದ್ದು, ಹೊಂಬಾಳೆ ಫಿಲಂಸ್ ಬ್ಯಾನರ್ನಡಿ ಇಂತಹ ಸಿನಿಮಾ ಬರ್ತಿರೋದಕ್ಕೆ ಸಹಜವಾಗಿಯೇ ನಿರೀಕ್ಷೆ ದುಪ್ಪಟ್ಟಾಗಿದೆ. ಜಗ್ಗಣ್ಣನ ಯುನಿಕ್ ಸ್ಟೈಲು, ಮ್ಯಾನರಿಸಂ ಜೊತೆ ಸಂತೋಷ್ ಬರವಣಿಗೆಯ ಗಮ್ಮತ್ತಿನ ಟೀಸರ್ ಸಿನಿಮಾದ ಅಸಲಿಯತ್ತನ್ನು ಪರಿಚಯಿಸಿತ್ತು. ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿತ್ತು.
ವರಮಹಾಲಕ್ಷ್ಮೀ ಹಬ್ಬದ ವಿಶೇಷ ಆಗಸ್ಟ್ 5ಕ್ಕೆ ತೆರೆಗೆ ಬರಬೇಕಿದ್ದ ಈ ಸಿನಿಮಾ ಇದೀಗ ಕಾರಣಾಂತರಗಳಿಂದ ಪೋಸ್ಟ್ಪೋನ್ ಆಗಿದೆ. ಅದನ್ನ ಸ್ವತಃ ಹೊಂಬಾಳೆ ಫಿಲಂಸ್ ಸೋಶಿಯಲ್ ಮೀಡಿಯಾ ಮೂಲಕ ಕಾತರಿ ಮಾಡಿದೆ. ಅಂದಹಾಗೆ ಮಾನ್ಸೂನ್ ಮಳೆ ಹಾಗೂ ಪ್ರೊಮೋಷನ್ಸ್ ಕೊರತೆಯೇ ಇದಕ್ಕೆ ಪ್ರಮುಖ ಕಾರಣ ಅನ್ನೋದು ಇನ್ಸೈಡ್ ಮಾಹಿತಿ.
ಸದ್ಯ ಜಗ್ಗೇಶ್ರ ತೋತಾಪುರಿ ಸಿನಿಮಾ ಕೂಡ ಕಂಪ್ಲೀಟ್ ಆಗಿದ್ದು, ಕೆಜಿಎಫ್ ರೀತಿ ಎರಡೆರಡು ಭಾಗಗಳಲ್ಲಿ ತೆರೆಗೆ ಬರ್ತಿದೆ. ಅವ್ರು ಸೆಪ್ಟೆಂಬರ್ 30ಕ್ಕೆ ದಸರಾ ಧಮಾಕ ನೀಡೋಕೆ ಭಾಗ ಒಂದನ್ನ ಅನೌನ್ಸ್ ಮಾಡಿದ್ದಾರೆ. ಕೆ ಎ ಸುರೇಶ್ ನಿರ್ಮಾಣದ ಹಾಗೂ ವಿಜಯ್ಪ್ರಸಾದ್ ನಿರ್ದೇಶನದ ತೋತಾಪುರಿ, ಸರ್ವಧರ್ಮಗಳ ಸಮನ್ವಯತೆಯನ್ನ ಸಾರುವಂತಹ ಸಾಮಾಜಿಕ ಕಳಕಳಿಯ ಚಿತ್ರವಾಗಲಿದೆ.
ಜಗ್ಗೇಶ್ ಬೇರೆ ರಾಜ್ಯಸಭಾ ಸದಸ್ಯರಾಗಿ ಮೇಲ್ಮನೆಗೆ ಆಯ್ಕೆಯಾಗಿ ಹೋಗಿದ್ದಾರೆ. ಅವ್ರ ರಾಜಕೀಯ ವಿದ್ಯಮಾನಗಳ ಬೆಳವಣಿಗೆಗಳ ಮಧ್ಯೆ ಪ್ರೊಮೋಷನ್ಸ್ ಕೊಂಚ ಕಷ್ಟವಾಗಬಹುದು. ಹಾಗಾಗಿಯೇ ಮೊದಲಿಗೆ ತೋತಾಪುರಿ ಅಂದುಕೊಂಡ ಡೇಟ್ಗೆ ತೆರೆಗೆ ಬರಲಿದ್ದು, ರಾಘವೇಂದ್ರ ಸ್ಟೋರ್ಸ್ ನವೆಂಬರ್ನಲ್ಲಿ ಥಿಯೇಟರ್ಗೆ ಬರೋ ಸಾಧ್ಯತೆಯಿದೆ. ಬಾಳೆ ಎಲೆ ಊಟಕ್ಕೆ ಇನ್ನೂ ಟೈಮಿದೆ ಅನ್ನೋದು ಪಕ್ಕಾ ಆಯ್ತು. ಆದ್ರೆ ನಿರ್ಮಾಪಕರು ಯಾವ ನಿರ್ಧಾರ ಕೈಗೊಳ್ತಾರೆ ಅನ್ನೋದನ್ನ ನಿರೀಕ್ಷಿಸಬೇಕಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ