Wednesday, January 22, 2025

ಕಾಂಗ್ರೆಸ್‌ನಲ್ಲಿ ತಾರಕಕ್ಕೇರಿದ ‘ಸಿಎಂ ಕುರ್ಚಿ’ ಕುಸ್ತಿ

ಬೆಂಗಳೂರು: ಚುನಾವಣೆಗೂ ಮೊದಲೇ ವಿಧಾನಸೌಧದ ಮೂರನೆಯ ಮಹಡಿಯ ಸಿಎಂ ಕುರ್ಚಿ ಮೇಲೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಟವೆಲ್ ಹಾಕಿದ್ದಾರೆ. ಮುಖ್ಯಮಂತ್ರಿ ಆಗುವ ಅಭಿಲಾಷೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ ನಾನೇ ಸಿಎಂ ಅನ್ನೋ ಆಸೆ ಹೊಂದಿರುವ ಟಗರುಗೆ ಬಂಡೆ ಡಿಚ್ಚಿ ಹೊಡೆದಿದೆ. ಸಿದ್ದರಾಮೋತ್ಸವದ ಮೂಲಕ ಹೈಲೈಟ್ ಆಗಲು ತಂತ್ರಗಾರಿಕೆ ರೂಪಿಸಿರುವ ಟಗರುಗೆ ಬಂಡೆ ಭಿನ್ನದನಿಯ ಸಂದೇಶ ರವಾನಿಸಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದ್ರು ಅನ್ನೋ ಮಾತಿನಂತೆ ಇನ್ನೂ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಬಹಳ ದಿನಗಳಿವೆ. ಆಗ್ಲೇ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ ಕುಸ್ತಿ ತಾರಕಕ್ಕೇರಿದೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಜಂಗೀಕುಸ್ತಿ ನಡೆಯುತ್ತಿದೆ. ನಾನಾ, ನೀನಾ ಅಂತಾ ಶಕ್ತಿ ಪ್ರದರ್ಶನಕ್ಕೆ ಈ ಇಬ್ಬರೂ ನಾಯಕರು ಮುಂದಾಗಿದ್ದಾರೆ. ಸಿದ್ದರಾಮೋತ್ಸವ ಹೆಸರಿನಲ್ಲಿ ಸಿದ್ದರಾಮಯ್ಯ ಬೃಹತ್ ಬಲ ಪ್ರದರ್ಶನಕ್ಕೆ ತಂತ್ರ ಹೆಣೆದಿದ್ದಾರೆ. ಇದರಿಂದ ವಿಚಲಿತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ತವರಿನಲ್ಲೇ ನಾನೇ ಕಾಂಗ್ರೆಸ್‌ನ ಮುಂದಿನ ಸಿಎಂ ಅಂತಾ ಬಹಿರಂಗವಾಗಿಯೇ ರಣಕಹಳೆ ಮೊಳಗಿಸಿದ್ದಾರೆ.

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ಆಗುವ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡದಿರುವುದಕ್ಕೆ ನಾನೇನು ರಾಜಕೀಯವಾಗಿ ಸನ್ಯಾಸಿಯೆ, ಕಾವಿ ಬಟ್ಟೆ ಹಾಕಿಕೊಂಡಿದ್ದೇನೆಯೇ ಅಂತಾ ಪ್ರಶ್ನಿಸಿದ್ರು..ಅಲ್ಲದೆ, ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾದವರು ಸಿಎಂ ಆಗುವುದು ಸಂಪ್ರದಾಯ. ಎಸ್‌.ಎಂ.ಕೃಷ್ಣ ನಂತರ ಸಿಎಂ ಆಗುವ ಅವಕಾಶ ಬಂದಿದೆ ಅಂತಾ ಹೇಳುವ ಮೂಲಕ ಸಿದ್ದರಾಮಯ್ಯಗೆ ಡಿಕೆಶಿ ಡಿಚ್ಚಿ ಹೊಡೆದರು.

ಇನ್ನು ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸಿಎಂ ಆದ್ರು. ಅದೇ ರೀತಿ ಒಕ್ಕಲಿಗರಿಗೂ ಈಗ ಸಿಎಂ ಸ್ಥಾನ ಒಲಿಯಲಿದೆ. ಒಕ್ಕಲಿಗರಷ್ಟೇ ಅಲ್ಲ, ಎಲ್ಲಾ ಸಮುದಾಯಗಳು ನನ್ನ ಬೆನ್ನಿಗೆ ನಿಂತರೆ ಇದೆಲ್ಲಾ ಸಾಧ್ಯ ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಒಕ್ಕಲಿಗ ಸಮುದಾಯದ ದಾಳ ಉರುಳಿಸಿದರು.

ಹಾಗೆಯೇ ಸಿದ್ದರಾಮಯ್ಯ ಜನ್ಮ ದಿನದ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಮಾತ್ನಾಡಿದ ಡಿಕೆಶಿ, ಸಿದ್ದರಾಮೋತ್ಸವ ವ್ಯಕ್ತಿ ಪೂಜೆಯಲ್ಲ. ಅದೊಂದು ಹುಟ್ಟಹಬ್ಬದ ಕಾರ್ಯಕ್ರಮವಷ್ಟೆ ಎಂದು ಟಾಂಗ್ ಕೊಟ್ಟ ಡಿಕೆಶಿ, ಸಿದ್ದರಾಮೋತ್ಸವದ ಮೂಲಕ ತಾನು ಹೈಲೈಟ್ ಆಗಬೇಕೆಂಬ ಸಿದ್ದರಾಮಯ್ಯಗೆ ಚಾಟಿ ಬೀಸಿದರು.

ಸಮ್ಮಿಶ್ರ ಸರ್ಕಾರ ಉರುಳಿಸಿ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಹೋಗಿರುವ ಶಾಸಕರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ತಿಳಿಸಿದರು. ರಾಜಕೀಯ ಅಂದರೆ, ಸಾಧ್ಯತೆಗಳ ಕಲೆ. ಆದರೆ, ಈ ಪೊಲಿಟಿಕಲ್ ಸ್ಟ್ರ್ಯಾಟಜಿಯ ಸಿಕ್ರೇಟ್‌ನ್ನು ಈಗಲೇ ಹೇಳುವುದಿಲ್ಲ ಎಂದು ತಿಳಿಸಿದರು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಎಲ್ಲಾ ಹಗರಣಗಳ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಕೇಸರಿ ಪಾಳೆಯಕ್ಕೆ ಚಳಿ ಹುಟ್ಟಿಸಿದ್ದಾರೆ. ಒಟ್ಟಾರೆ ಕಾಂಗ್ರೆಸ್‌ನಲ್ಲಿ ಚುವಾವಣೆಗೂ ಮೊದಲೇ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಿಎಂ ಕುರ್ಚಿ ಕಿತ್ತಾಟ ತಾರಕಕ್ಕೇರಿದೆ. ಮುಂದಿನ ದಿನಗಳಲ್ಲಿ ಇದು ಯಾವ ಸ್ವರೂಪ ತಾಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಕ್ಯಾಮರಾ ಮೆನ್ ಹರೀಶ್ ಜೊತೆ ಸುರೇಶ್ ಬಿ. ಪವರ್ ಟಿವಿ ಮೈಸೂರು‌

RELATED ARTICLES

Related Articles

TRENDING ARTICLES