ಬೆಂಗಳೂರು : 545.. ಈ ಸಂಖ್ಯೆಯಿಂದಲೇ ಶನಿ ಹೆಗಲೇರಿಸಿಕೊಂಡ ಎಡಿಜಿಪಿ ಅಮೃತ್ ಪೌಲ್ ಭ್ರಷ್ಟರಲ್ಲಿ ಭ್ರಷ್ಟ ಅಧಿಕಾರಿ ಅನ್ನೋದು ಜಗಜ್ಜಾಹೀರಾಗಿದೆ. ಈ ಪೌಲ್ ಯಾವ್ಯಾವ ಪೋಸ್ಟ್‌ಗೆ ಹೋಗಿದ್ರೋ ಅಲ್ಲೆಲ್ಲಾ ವರ್ಕೌಟ್ ..ವರ್ಕೌಟ್ ಅನ್ನೋ ಜಪವಷ್ಟೇ. ಈ ಹಿಂದೆ ಕೇಂದ್ರ ವಿಭಾಗದ ಐಜಿಪಿಯಾಗಿದ್ದ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ ಬಳಿಯಲ್ಲಿ ಹತ್ತಾರು ಎಕರೆ ಜಮೀನನ್ನ ಖರೀದಿಸಿದ್ದಾರೆ.
ಅದೇ ರೀತಿ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಎಡಿಜಪಿಯಾಗಿದ್ದಾಗ್ಲೂ ಪೌಲ್ ತಮ್ಮ ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲಿ ನೂರಾರು ಕೋಟಿ ಬೆಲೆಬಾಳುವ ಫಾರ್ಮೌಸ್, ಕೃಷಿಭೂಮಿ ಸೇರಿದಂತೆ ಕಮರ್ಷಿಯಲ್ ಜಾಗವನ್ನ ಕೂಡ ಖರೀದಿ ಮಾಡಿದ್ದಾರೆ.
ಪೌಲ್ ಅಕ್ರಮದಿಂದ ಸಂಪಾದಿಸಿರೋ ಜಾಗಗಳು ಯಾವ್ದೆಂದ್ರೆ ಚಿಕ್ಕಬಳ್ಳಾಪುರ ನಂದಿಹೋಬಳಿ ಸರ್ವೇ ನಂಬರ್ 247ರಲ್ಲಿ ನಾಲ್ಕು ಎಕರೆಯಲ್ಲಿ ಫಾರ್ಮೌಸನ್ನ ಹೊಂದಿದ್ದಾರೆ. ಅದೇ ರೀತಿ ಫಾರ್ಮೌಸ್ ನ ಆಸುಪಾಸಿನ 4 ಎಕರೆ ಜಾಗವನ್ನ ಕೂಡ ಇತ್ತೀಚಿಗೆ ಪೌಲ್ ತಮ್ಮ ತಂದೆ ನೇತರಾಮ್ ಬನ್ಸಾಲ್ ಹೆಸರಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು ಶಿಡ್ಲಘಟ್ಟ ನೆಲಪ್ಪನಹಳ್ಳಿಯ ಸರ್ವೇ ನಂಬರ್ 49 ಹಾಗೂ 50 ರಲ್ಲಿ ನಾಲ್ಕು ಎಕರೆ ಮೂವತ್ತೊಂಬತ್ತು ಗುಂಟೆ ಹಾಗೂ ಮೂರು ಎಕರೆ ಮೂವತ್ತು ಗುಂಟೆ ಜಾಗವನ್ನ ಖರೀದಿ ಮಾಡಿದ್ದಾರೆ ಎಂಬ ಮಾಹಿತಿಗಳು ಇದೀಗ ಸಿಐಡಿಗೆ ದಾಖಲೆ ಸಮೇತ ದೊರೆತಿದೆ.
ಈಗಾಗ್ಲೇ ಸಿಐಡಿ ಅಧಿಕಾರಿಗಳು ಪಿಎಸ್‌ಐ ಸ್ಕ್ಯಾಮ್‌ನ ಕಿಂಗ್‌ಪಿನ್ ಪೌಲ್‌ರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಇನ್ನು ಕೆಲವೇ ದಿನದಲ್ಲಿ 31 ಆರೋಪಿಗಳ ವಿರುದ್ಧ ಸಿಐಡಿ ಅಧಿಕಾರಿಗಳು ದೋಷಾರೋಪಣ ಪಟ್ಟಿಯನ್ನ ಕೋರ್ಟ್ ಗೆ ಸಲ್ಲಿಸಲಿದ್ದಾರೆ. ಅಷ್ಟರ ಒಳಗಾಗಿ ಪೌಲ್‌ರ ಆಸ್ತಿಪಾಸ್ತಿಯನ್ನ ಹುಡುಕಿ ಕೋರ್ಟ್‌ಗೆ ದಾಖಲೆ ಸಮೇತ ನೀಡಲು ಶತಾಯಗತಾಯ ಪ್ರಯತ್ನಿಸ್ತಿದ್ದಾರೆ.
ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ