ಹೈದರಾಬಾದ್ : ದಕ್ಷಿಣ ಭಾರತದಲ್ಲಿ ಶತಾಯಗತಾಯ ಪಕ್ಷವನ್ನು ಭದ್ರಪಡಿಸಿ ಅಧಿಕಾರ ಚುಕ್ಕಾಣಿ ಹಿಡಿಯಲೇಬೇಕೆಂದು ಪಣ ತೊಟ್ಟಿದೆ ಬಿಜೆಪಿ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮುತ್ತಿನ ನಗರಿ ಹೈದರಾಬಾದ್‍ನಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆದಿದೆ. ಉತ್ತರಭಾರತದಲ್ಲಿ ತನ್ನ ಮತ ಬ್ಯಾಂಕ್‍ನ್ನು ಗಟ್ಟಿ ಮಾಡಿಕೊಂಡಿರುವ ಬಿಜೆಪಿ ಇದೀಗ ದಕ್ಷಿಣ ಭಾರತದತ್ತ ಚಿತ್ತ ಹರಿಸಿದ್ದು, ಇದಕ್ಕಾಗಿಯೇ ತೆಲಂಗಾಣದಲ್ಲಿ ಎರಡು ದಿನಗಳ ಕಾಲ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಿತ್ತು. 2024ರ ಲೋಕಸಭೆ ಚುನಾವಣೆ ಹಾಗೂ ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಗುಜರಾತ್, ಹಿಮಾಚಲಪ್ರದೇಶ, 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೂ ಕಾರ್ಯತಂತ್ರವನ್ನು ಕಾರ್ಯಕಾರಿಣಿಯಲ್ಲಿ ಹೆಣೆದಿದೆ. ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಕಾರ್ಯದರ್ಶಿಗಳು, ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳು, ಕಾರ್ಯಕಾರಿಣಿ ಸದಸ್ಯರು, ಸಂಸದೀಯ ಮಂಡಳಿಯ ಸದಸ್ಯರು ಸೇರಿದಂತೆ ಪ್ರಮುಖರು ಭಾಗವಹಿಸಿದ್ರು.
ಭಾರತ ವಿಶ್ವಗುರುವಾಗುತ್ತಿದೆ. ಸಂಪೂರ್ಣ ಭಾರತದಲ್ಲಿ ಬಿಜೆಪಿ ಆವರಿಸುತ್ತಿದೆ. ಜನಪರ ಆಡಳಿತ, ಅಭಿವೃದ್ಧಿಗಾಗಿ ಜನರು ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕುಟುಂಬ ರಾಜಕಾರಣ, ಜಾತೀಯತೆ ಹಾಗೂ ತುಷ್ಟೀಕರಣದ ರಾಜಕೀಯದಿಂದ ದಶಕಗಳ ವರೆಗೆ ಭಾರತೀಯರು ಸಂಕಷ್ಟ ಅನುಭವಿಸಿದ್ದಾರೆ. 2014ರಿಂದ ನರೇಂದ್ರ ಮೋದಿ ಆಡಳಿತ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಹೊಸ ಬದಲಾವೆಗೆ ನಾಂದಿ ಹಾಡಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀ ಯಕಾರ್ಯಕಾರಿಣಿ ಸಭೆಯಲ್ಲಿ ಹಿಂದೂಗಳಿಗೆ ಸೀಮಿತವಾಗದೆ ಎಲ್ಲಾ ವಂಚಿತ, ದೀನದಲಿತ ಸಮುದಾಯಗಳನ್ನು ತಲುಪು ವಂತೆ ಮೋದಿ ಕರೆ ಕೊಟ್ಟಿದ್ದಾರೆ. ವಿರೋಧ ಪಕ್ಷಗಳು ಅನುಸರಿಸುತ್ತಿರುವ ವಂಶಾಡಳಿತ, ಕುಟುಂಬ ಆಧಾರಿತ, ಜಾತಿವಾದಿ ಮತ್ತು ತುಷ್ಟೀ ಕರಣ ರಾಜಕೀಯವನ್ನು ನಿರ್ಮೂಲನೆ ಮಾಡಲು ಬಿಜೆಪಿ ಒತ್ತು ನೀಡುತ್ತದೆ ಎಂದು ಹೇಳಿದ್ರು
ಸದ್ಯ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಮುಕ್ತಾಯವಾಗಿದೆ. ಕಾರ್ಯಕಾರಿಣಿಯಲ್ಲಿ ಮಿಷನ್ ದಕ್ಷಿಣ ವಿಚಾರ ಪ್ರಸ್ತಾಪವಾಗಿದೆ.. ಒಟ್ನಲ್ಲಿ..2024ರ ಲೋಕಸಭೆ ಚುನಾವಣೆ ಹಾಗೂ ಈ ವರ್ಷದ ಅಂತ್ಯಕ್ಕೆ ನಡೆಯಲಿರುವ ಗುಜರಾತ್, ಹಿಮಾಚಲಪ್ರದೇಶ, 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೂ ಕಾರ್ಯತಂತ್ರವನ್ನು ಕಾರ್ಯಕಾರಿಣಿಯಲ್ಲಿ ಹೆಣೆದಿದೆ.