ಕಾಶ್ಮೀರ : 2 ವರ್ಷಗಳ ನಂತರ ಅಮರನಾಥ ಯಾತ್ರೆ ಮತ್ತೆ ಪ್ರಾರಂಭವಾಗಿದ್ದು, ಸುಮಾರು 2,750 ಯಾತ್ರಿಕರ ಮೊದಲ ಬ್ಯಾಚ್ ಇಂದು ಯಾತ್ರೆಯನ್ನು ಪ್ರಾರಂಭಿಸಿದೆ.
ದಕ್ಷಿಣ ಕಾಶ್ಮೀರದಲ್ಲಿನ ಹಿಮಾಲಯದ ಗುಹೆಯಲ್ಲಿ ಸ್ವಾಭಾವಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗವನ್ನು ಹೊಂದಿರುವ ಅಮರನಾಥ ಜಗತ್‍ಪ್ರಸಿದ್ಧವಾಗಿದೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್‍ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್‍ನಲ್ಲಿ ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲಾ ಅವರು ಯಾತ್ರೆಗೆ ಚಾಲನೆ ನೀಡಿದರು.
ಯಾತ್ರಿಕರು ಬಹುತೇಕ ಕಾಲ್ನಡಿಗೆಯಲ್ಲೇ ಪ್ರಯಾಣಿಸುತ್ತಾರೆ, ಮಾರ್ಗ ಮಧ್ಯೆ ಶೀಷ್‍ನಾಗ್ ಮತ್ತು ಪಂಚತಾರ್ಣಿಯಲ್ಲಿ ಯಾತ್ರಿಕರು ರಾತ್ರಿ ತಂಗಲು ವ್ಯವಸ್ಥೆ ಮಾಡಲಾಗಿದೆ. 43 ದಿನಗಳ ಯಾತ್ರೆಯನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಆಡಳಿತವು ಪವಿತ್ರ ಗುಹೆಗೆ ಪಹಲ್ಗಾಮ್ ಮತ್ತು ಬಾಲ್ಟಾಲ್ ಮಾರ್ಗಗಳಲ್ಲಿ ಭಾರೀ ಭದ್ರತೆಯನ್ನು ಒದಗಿಸುವ ಮೂಲಕ ಉಗ್ರರ ದಾಳಿಯನ್ನು ತಪ್ಪಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.