ಪ್ಯಾಕ್ ಮಾಡಲಾಗಿರುವ, ಲೇಬಲ್ ಇರುವ ಆಹಾರ ವಸ್ತುಗಳಾದ ಮಾಂಸ, ಮೀನು, ಮೊಸರು, ಪನ್ನೀರ್ ಮತ್ತು ಜೇನುತುಪ್ಪಕ್ಕೆ ಇನ್ನು ಮುಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ.
ಯಾವೆಲ್ಲ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಇಲ್ಲವಾಗಿಸಬಹುದು ಎಂಬುದನ್ನು ಪರಿಶೀಲಿಸಲು ರಚಿಸಲಾಗಿದ್ದ ಸಚಿವರ ಸಮಿತಿಯ ಶಿಫಾರಸುಗಳನ್ನು ಜಿಎಸ್‌ಟಿ ಮಂಡಳಿ ಒಪ್ಪಿಕೊಂಡಿರುವ ಕಾರಣ, ಈ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಸದಸ್ಯರಾಗಿರುವ ಮಂಡಳಿಯು ಈ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಪ್ಯಾಕ್ ಮಾಡಿರುವ, ಲೇಬಲ್ ಇರುವ, ಬ್ರ್ಯಾಂಡೆಡ್ ಅಲ್ಲದ ಆಹಾರ ವಸ್ತುಗಳಿಗೆ ಇದುವರೆಗೆ ಜಿಎಸ್‌ಟಿ ವಿನಾಯಿತಿ ಇತ್ತು.
ಶಿಫಾರಸುಗಳನ್ನು ಮಂಡಳಿ ಒಪ್ಪಿಕೊಂಡಿರುವ ಪರಿಣಾಮವಾಗಿ ಪ್ಯಾಕ್ ಆಗಿರುವ, ಲೇಬಲ್ ಇರುವ ಮಾಂಸ (ಫ್ರೀಜ್ ಮಾಡಿದ ಮಾಂಸ ಹೊರತುಪಡಿಸಿ), ಮೀನು, ಮೊಸರು, ಪನ್ನೀರ್, ಜೇನುತುಪ್ಪ, ಫಾಕ್ಸ್‌ನಟ್ ಗೋಧಿ ಮತ್ತು ಇತರ ಏಕದಳ ಧಾನ್ಯಗಳು, ಗೋಧಿ ಹಿಟ್ಟು, ಬೆಲ್ಲ, ಮಂಡಕ್ಕಿ ಇನ್ನು ಮುಂದೆ ಶೇಕಡ 5ರಷ್ಟು ತೆರಿಗೆ ವ್ಯಾಪ್ತಿಗೆ ಬರಲಿವೆ. ಸಾವಯವ ಗೊಬ್ಬರಕ್ಕೂ ಇಷ್ಟೇ ಪ್ರಮಾಣದ ತೆರಿಗೆ ಅನ್ವಯವಾಗಲಿದೆ.
ಅಟ್ಲಾಸ್ ಸೇರಿದಂತೆ ನಕಾಶೆಗಳು ಮತ್ತು ಚಾರ್ಟ್‌ಗಳಿಗೆ ಶೇಕಡ 12ರಷ್ಟು ತೆರಿಗೆ ಕೊಡಬೇಕಾಗುತ್ತದೆ. ಪ್ಯಾಕ್ ಮಾಡಿರದ, ಲೇಬಲ್ ಇಲ್ಲದ ಹಾಗೂ ಯಾವುದೇ ಬ್ರ್ಯಾಂಡ್ ಇರದ ಉತ್ಪನ್ನಗಳಿಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗಿನಂತೆಯೇ ತೆರಿಗೆ ವಿನಾಯಿತಿ ಮುಂದುವರಿಯಲಿದೆ.