Monday, December 23, 2024

ಚಾರ್ಲಿಗೆ ಟ್ಯಾಕ್ಸ್ ಫ್ರೀ.. ಸಿಎಂಗೆ ರಕ್ಷಿತ್ ಶೆಟ್ಟಿ ಥ್ಯಾಂಕ್ಸ್..!

ದಿನದಿಂದ ದಿನಕ್ಕೆ ಚಾರ್ಲಿಯ ಚಮತ್ಕಾರ ಸಖತ್ ಜೋರಾಗ್ತಿದೆ. ಬರೀ ಕನ್ನಡಿಗರಷ್ಟೇ ಅಲ್ಲ, ಪರಭಾಷಿಗರೂ ಸಹ ಕರ್ಣ- ಚಾರ್ಲಿ ಜೋಡಿಯ ಮೋಡಿಗೆ ಫುಲ್ ಫಿದಾ ಆಗಿಬಿಟ್ಟಿದ್ದಾರೆ. ಸ್ವತಃ ಸಿಎಂ ಅವ್ರೇ ಸಿನಿಮಾ ನೋಡಿಭಾವುಕರಾಗಿದ್ರು. ಇದೀಗ ಟ್ಯಾಕ್ಸ್ ಫ್ರೀ ಮಾಡಿ ಸಿಂಪಲ್ ಸ್ಟಾರ್ ಸೆಲೆಬ್ರೇಷನ್​ನ ಜೋರು ಮಾಡಿದ್ದಾರೆ. ಜೊತೆಗೆ ಬಹುಭಾಷಾ ನಟಿ ಕೊಟ್ಟಿರೋ ಕಾಂಪ್ಲಿಮೆಂಟ್​ಗೆ ರಕ್ಷಿತ್ ದಿಲ್​ಖುಷ್ ಆಗಿದ್ದಾರೆ.

ನಾಯಿ & ನಾಯಕ ಪ್ರಧಾನ ಕಥೆಗೆ ಎಲ್ರೂ ಬಹುಪರಾಕ್

777 ಚಾರ್ಲಿ.. ಇದು ಬರೀ ಸಿನಿಮಾ ಅಲ್ಲ. ಜರ್ನಿ ಆಫ್ ಬ್ಯೂಟಿಫುಲ್ ಎಕ್ಸ್​ಪೀರಿಯೆನ್ಸ್. ಹೌದು.. ಸದಾ ಹೊಸತನಕ್ಕೆ ಹಾತೊರೆಯೋ ಕ್ರಿಯಾಶೀಲ ವ್ಯಕ್ತಿ ರಕ್ಷಿತ್ ಶೆಟ್ಟಿಯ ಟ್ಯಾಲೆಂಟ್​ನ ಕೈಗನ್ನಡಿ ಈ ಸಿನಿಮಾ. ಅವನೇ ಶ್ರೀಮನ್ನಾರಾಯಣ ಸೋಲಿನಿಂದ ತನ್ನಲ್ಲಿದ್ದ ಸಿನಿಮೋತ್ಸಹದ ಕಿಚ್ಚಿನ ಪ್ರತೀಕ ಈ ಚಾರ್ಲಿ ಅಂದ್ರೆ ತಪ್ಪಾಗಲ್ಲ.

ಹಾಲಿವುಡ್ ಶೈಲಿಯಲ್ಲಿ ಕನ್ನಡದಿಂದಲೂ ಒಂದು ಪ್ಯಾನ್ ಇಂಡಿಯಾ ಡಾಗ್ ಬೇಸ್ಡ್ ಮೂವಿ ಮಾಡೋ ಮಹದಾಸೆ ಹೊತ್ತ ಕಿರಣ್​ರಾಜ್ ಕನಸು ಕೊನೆಗೂ ನನಸಾಗಿದೆ. ಆ ಕನಸಿಗೆ ರೆಕ್ಕೆ ಕಟ್ಟಿ, ಸ್ವತಂತ್ರವಾಗಿ ಹಾರಲು ಬಿಟ್ಟ ರಕ್ಷಿತ್ ಶೆಟ್ಟಿಗೂ ಇದ್ರಿಂದ ಬಹುದೊಡ್ಡ ಹೆಸರೇ ಬಂದಿದೆ. ಬರೀ ಕನ್ನಡಿಗರಷ್ಟೇ ಅಲ್ಲ, ಪರಭಾಷಾ ಸ್ಟಾರ್ಸ್​ ಹಾಗೂ ಸಿನಿರಸಿಕರು ಕೂಡ ಚಾರ್ಲಿ ಚಮತ್ಕಾರಕ್ಕೆ ಶಿಳ್ಳೆ, ಚಪ್ಪಾಳೆ ಹೊಡೆಯೋದ್ರ ಜೊತೆ ಎರಡು ಹನಿ ಕಣ್ಣೀರು ಹಾಕಿ ಭಾವುಕರಾಗ್ತಿದ್ದಾರೆ.

ನಮ್ಮ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವ್ರೇ ರೀಸೆಂಟ್ ಆಗಿ ಸಿನಿಮಾ ನೋಡಿ ವ್ಹಾವ್ ಅಂದಿದ್ರು. ಅಷ್ಟೇ ಅಲ್ಲ, ತಮ್ಮ ಮನೆಯಲ್ಲಿದ್ದ ನಾಯಿಯನ್ನ ನೆನೆದು ಭಾವುಕರಾಗಿ ಮಗುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ರು. ಇದೀಗ ಇಂತಹ ಯೂನಿರ್ವಸಲ್ ಸಬ್ಜೆಕ್ಟ್ ಸಿನಿಮಾ ಎಲ್ಲರೂ ನೋಡುವಂತಾಗಬೇಕು ಅಂತ ಹಂಡ್ರೆಡ್ ಪರ್ಸೆಂಟ್ ಟ್ಯಾಕ್ಸ್ ಫ್ರೀ ಮಾಡೋ ಮೂಲಕ ರಕ್ಷಿತ್ ಸೆಲೆಬ್ರೇಷನ್​ನ ದುಪ್ಪಟ್ಟು ಮಾಡಿದ್ದಾರೆ.

ಹೌದು.. ಸದ್ಯ ನಮ್ಮ ಕರ್ನಾಟಕದಲ್ಲಿ 777 ಚಾರ್ಲಿ ಚಿತ್ರಕ್ಕೆ ಕಂಪ್ಲೀಟ್ ಟ್ಯಾಕ್ಸ್ ಫ್ರೀ. ಇನ್ನೂ ಯಾರೆಲ್ಲಾ ಸಿನಿಮಾ ನೋಡಿಲ್ವೋ ಅವ್ರಿಗೆಲ್ಲಾ ಇದೊಂದು ಸುವರ್ಣಾವಕಾಶ. ಶ್ವಾನಪ್ರಿಯರಿಗಂತೂ ಮನರಂಜನೆಯ ರಸದೌತಣ. ಭಾವನೆಗಳ ದಿಬ್ಬಣ. ಅದಾಗಬೇಕು ಅಂದ್ರೆ ತಪ್ಪದೇ ಹತ್ತಿರದ ಥಿಯೇಟರ್​ಗಳನ್ನ ಕಾಲಿಡಬೇಕಿದೆ.

ನಿಮ್ಮೊಂದಿಗೆ ಕೆಲಸ ಮಾಡ್ಬೇಕು ಅಂತ ಕೂಗಿ ಹೇಳಿದ ನಟಿ

ಸಿಂಪಲ್ ಸ್ಟಾರ್ ಶ್ರದ್ಧೆಗೆ ಶ್ರದ್ಧಾ ಶ್ರೀನಾಥ್ ಕ್ಲೀನ್ ಬೋಲ್ಡ್

ಯುಟರ್ನ್​ ಚೆಲುವೆ ಶ್ರದ್ಧಾ ಶ್ರೀನಾಥ್ ಸಮೇತ ಚಾರ್ಲಿ ಸಿನಿಮಾ ನೋಡಿ ಸಿಕ್ಕಾಪಟ್ಟೆ ಹೊಗಳಿದ್ದಾರೆ. ಅದ್ರಲ್ಲೂ ರಕ್ಷಿತ್​ಗೆ ಟ್ವೀಟ್ ಮೂಲಕ ಸಿಕ್ಕಾಪಟ್ಟೆ ಗುಣಗಾನ ಮಾಡಿದ್ದಾರೆ ಶ್ರದ್ಧಾ ಶ್ರೀನಾಥ್. ಈಕೆ ಬಹುಭಾಷಾ ನಟಿಯಾಗಿದ್ದುಕೊಂಡು, ಸದಾ ಎಕ್ಸ್​ಪೆರಿಮೆಂಟಲ್ ಮೂವೀಸ್​​ನಿಂದ ಎಲ್ಲರ ಗಮನ ಸೆಳೆಯುತ್ತಿರೋ ಬ್ಯೂಟಿ. ಇವ್ರೇ ಒಂದು ಸಿನಿಮಾನ ಮೆಚ್ತಾರೆ ಅಂದ್ರೆ ಅದ್ರ ಸತ್ವ ಎಂಥದ್ದು ಅನ್ನೋದನ್ನ ನೀವೇ ಊಹಿಸಿ.

ಸಿನಿಮಾ ಹಾಗೂ ರಕ್ಷಿತ್ ಶೆಟ್ಟಿಯ ಎಫರ್ಟ್​ಗೆ ಫುಲ್ ಮಾರ್ಕ್ಸ್ ಕೊಡೋದ್ರ ಜೊತೆಗೆ ನಾ ಜೋರಾಗಿ ಕೂಗಿ ಹೇಳ್ತಿದ್ದೀನಿ, ನಿಮ್ಮೊಂದಿಗೆ ಕೆಲಸ ಮಾಡಬೇಕು ಎಂದಿದ್ದಾರೆ. ಅದಕ್ಕೆ ರಕ್ಷಿತ್ ಶೆಟ್ಟಿ ಕೂಡ ಸಖತ್ ಸಿಂಪಲ್ ಆಗಿಯೇ ತಮ್ಮ ಸಂಭ್ರಮವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿ, ಧನ್ಯವಾದ ತಿಳಿಸಿದ್ದಾರೆ.

ಅದೇನೇ ಇರಲಿ, ಕನ್ನಡದ ಸಿನಿಮಾಗಳು ಹೀಗೆ ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡ್ತಿರೋದು ನಿಜಕ್ಕೂ ಕನ್ನಡಿಗರಾದ ನಾವು ಸಿಕ್ಕಾಪಟ್ಟೆ ಹೆಮ್ಮೆ ಪಡೋ ವಿಚಾರ. ಮಾಸ್ ಸಿನಿಮಾಗಳ ಜೊತೆ ಪ್ರಯೋಗಾತ್ಮಕ ಚಿತ್ರಗಳು ಜನರ ಮನ ಮುಟ್ಟುತ್ತಿರೋದು ನಿಜಕ್ಕೂ ಅವ್ರ ವರ್ಷಾನುಗಟ್ಟಲೆಯ ಸಿನಿಮಾ ತಪ್ಪಸ್ಸಿನ ಫಲ ಅಂದ್ರೆ ತಪ್ಪಾಗಲ್ಲ. ಇಂತಹ ಚಿತ್ರಗಳು ಮತ್ತಷ್ಟು ಪ್ರತಿಭೆಗಳಿಗೆ ಸ್ಫೂರ್ತಿ ಆಗ್ಬೇಕು. ಆಗಲೇ ಸಿನಿಮಾಗೊಂದು ಬೆಲೆ, ಆ ಕಲೆಗೊಂದು ನೆಲೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES