ಕೋಲಾರ: ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಭೀಕರವಾಗಿ ಕೊಲೆಯಾಗಿದ್ದಾರೆ. ಇವತ್ತು ಮುಂಜಾನೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ದುಷ್ಕರ್ಮಿಗಳ ಮಾರಕಾಸ್ತ್ರಗಳ ದಾಳಿಗೆ ಬಲಿಯಾಗಿದ್ದಾರೆ. ಜಗನ್ ಹತ್ಯೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಜಗನ್ ಮೋಹನ್ ಹತ್ಯೆ ನಡೆದಿದೆ. ಇವತ್ತು ಬೆಳ್ಳಿಗ್ಗೆ ಮುತ್ಯಾಲಪೇಟೆಯ ಗಂಗಮ್ಮ ದೇವಾಲಯದ ಬೀಗ ತೆಗೆಯಲು ಹೋದಾಗ ಅಪರಿಚಿತ ಗುಂಪೊಂದು ಜಗನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಜಗನ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗ ಜಗನ್ ಮೋಹನ್ ರೆಡ್ಡಿ ಮೇಲೆ ನಡೆದ ದಾಳಿಯಿಂದ ಕೋಲಾರ ಬೆಚ್ಚಿಬಿದ್ದಿದೆ. ಮುಳಬಾಗಿಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜಗನ್‌ಮೋಹನ್ ರೆಡ್ಡಿ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವ್ರ ಬಲಗೈ ಬಂಟ ಆಗಿದ್ರು. ನಗರದ ಮುತ್ಯಾಲಪೇಟೆಯಲ್ಲಿ ಅಟ್ಯಾಕ್ ಮಾಡಿದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆಗೈದಿದ್ದಾರೆ. ಕೊಲೆ ಯಾವ ಕಾರಣಕ್ಕಾಗಿ ನಡೀತು, ಯಾರು ಮಾಡಿದ್ರು ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅದ್ಧೂರಿಯಾಗಿ ಮೃತ ಜಗನ್ ಮೋಹನ್ ರೆಡ್ಡಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದರು. ಇವರ ಕೊಲೆಗೆ ಹಲವು ದಿನಗಳಿಂದ ಸಂಚು ರೂಪಿಸಿದ್ದರು ಎನ್ನಲಾಗಿದೆ. ಇವತ್ತು ಬೆಳಗ್ಗೆ ದೇವಸ್ಥಾನದ ಗಂಟೆ ಬಾರಿಸಿ ಮನೆಯಲ್ಲಿದ್ದ ಜಗನ್ ಮೋಹನ್ ರೆಡ್ಡಿಯನ್ನು ದುಷ್ಕರ್ಮಿಗಳು ಹೊರ ಕರೆಯಿಸಿಕೊಂಡರು. ದೇವಸ್ಥಾನಕ್ಕೆ ಯಾರೋ ಭಕ್ತರು ಬಂದಿದ್ದಾರೆಂದು ಬಾಗಿಲು ತೆಗೆಯಲು ಬಂದ ಜಗನ್ ಮೋಹನ್ ರೆಡ್ಡಿಯನ್ನು ಚಾಕು, ಲಾಂಗ್ ಮಚ್ಚುಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ರೆಡ್ಡಿ ಕೊಲೆಯ ದೃಶ್ಯಗಳು ಲಭ್ಯವಾಗಿದೆ. ಈ ದೃಶ್ಯದಲ್ಲಿ ಆರೋಪಿಗಳು ಕೊಲೆ ಮಾಡಿ ಪರಾರಿಯಾಗುವ ದೃಶ್ಯಗಳು ಸೆರೆಯಾಗಿದೆ. ಕೋಲಾರದ ಮೆಡಿಕಲ್ ಕಾಲೇಜು ಶವಾಗಾರದಲ್ಲಿ ಶವಪರೀಕ್ಷೆ ನಂತರ ಜಗನ್ ಮೋಹನ್ ಮೃತ ದೇಹವನ್ನು ಸ್ವಗ್ರಾಮ ಆವಣಿಗೆ ಕೊಂಡಯ್ಯಲಾಯಿತು. ಶವಾಗಾರದ ಬಳಿ ರಾಜಕೀಯ ಮುಖಂಡರು, ಕಾಂಗ್ರೆಸ್ ಹಾಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಸೇರಿ ಹಲವು ಮುಖಂಡರು ಆಗಮಿಸಿದ್ದರು. ಕೊಲೆ ನಡೆದ ಸ್ಥಳಕ್ಕೆ ಕೋಲಾರ ಎಸ್ಪಿ ದೇವರಾಜ್ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸ್ಥಳೀಯರ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಯಾದ ಜಗನ್ ಮೋಹನ್ ಪುತ್ರ ಮಿಥುನ್ ಸಾಯಿಕೃಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ತಂದೆ ಜಗನ್ ಮೋಹನ್ ರೆಡ್ಡಿ ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ತಂದೆ ಹತ್ತಾರು ಜನ ಸಹಾಯ ಮಾಡುತ್ತಿದ್ದರು. ಎಂದಿನಂತೆಯೇ ಗಂಗಮ್ಮ ದೇವಸ್ಥಾನದ ಬಾಗಿಲು ತೆಗೆಯುವಾಗ ನಮ್ಮ ತಂದೆ ಕೊಲೆಯಾಗಿದೆ. ಪೊಲೀಸರು ದುಷ್ಕರ್ಮಿಗಳನ್ನು ಹಿಡಿದು ಶಿಕ್ಷೆ ಕೊಡಿಸಬೇಕು ಎಂದು ಹತ್ಯೆಯಾದ ಜಗನ್ ಮೋಹನ್ ಪುತ್ರ ಮಿಥುನ್ ಸಾಯಿಕೃಷ್ಣ ಕಣ್ಣೀರು ಹಾಕಿದ್ದಾರೆ.
ಮುಳಬಾಗಲು ಪಟ್ಟಣಕ್ಕೆ ಭೇಟಿಯಿತ್ತ ಕೇಂದ್ರವಲಯ ಐಜಿ ಚಂದ್ರಶೇಖರ ಅವರು, ಕೊಲೆಗಡುಕರನ್ನು ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ, ಮಾಜಿ ರೌಡಿಶೀಟರ್ ಆಗಿದ್ದ ಜಗನ್ ಮೋಹನ್ ರೆಡ್ಡಿ ಹತ್ಯೆ ಮುಳಬಾಗಿಲು ಜನತೆಯನ್ನ ಬೆಚ್ಚಿಬೀಳಿಸಿದೆ. ಹತ್ಯೆಗೆ ರಿಯಲ್ ಎಸ್ಟೇಟ್ ಮಾಫಿಯಾನಾ ಇಲ್ವಾ ಹಳೇ ದ್ವೇಷವೇ ಕಾರಣ ಅಂತಾ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಾಗಿದೆ.