Sunday, December 22, 2024

ಸೆಲ್ಫಿ ಕ್ರೇಝ್ ತಂದ ಆಪತ್ತು!

ಚಿಕ್ಕಮಗಳೂರು: ಹುಟ್ಟು ಅಂದ್ಮೆಲೆ ಸಾವು ನಿಶ್ಚಿತ. ಆದ್ರೆ ಜವರಾಯ ನಮ್ಮನ್ನ ಹುಡುಕ್ಕೊಂಡ್ ಬರಬೇಕೇ ವಿನಃ ನಾವೇ ಅವನನ್ನ ಹುಡುಕ್ಕೊಂಡ್ ಹೋಗ್ಬಾರ್ದು. ಆದ್ರೆ, ಕಾಫಿನಾಡಲ್ಲಿ ಆಗಿದ್ದು ಅದೇ. ಕಳಸ ತಾಲೂಕಿನ ಸೋಮಾವತಿ ನದಿಯ ದೊಡ್ಡಹೊಳೆಯಲ್ಲಿ ಆಂಧ್ರ ಮೂಲದ ಬೆಂಗಳೂರು ಸಾಫ್ಟ್​ವೇರ್​​ ಇಂಜಿನಿಯರ್ 25 ವರ್ಷದ ಪ್ರಣಯ್ ಮಹೇಂದ್ರ, ನದಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಸಾವನ್ನಪ್ಪಿದ್ದಾನೆ.

ನೋಡಿದ್ರಲ್ಲಾ, ಒಂಬತ್ತು ಜನ ಯುವಕರಲ್ಲಿ ಕೆಲವರು ದಡದ ಮೇಲಿದ್ರೆ, ಕೆಲವ್ರು ನದಿಯೊಳಗೆ ಇಳಿದಿದ್ದರು. ಆದ್ರೆ ಪ್ರಣಯ್ ಮಹೇಂದ್ರ ಅಲ್ಲಿನ ಸೌಂದರ್ಯಕ್ಕೆ ಸೋತು ಸೆಲ್ಫಿ-ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ನದಿಯ ಆಳದ ಅರಿವಿಲ್ಲದೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಹೀಗಾಗಿ, ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಗ್ತಿದೆ. ನದಿಗಳ ನೀರಿನ ಹರಿವಿನ ಪ್ರಮಾಣ ಕೂಡ ಏರಿಕೆಯಾಗಿದೆ. ಪ್ರವಾಸಿಗರಿಗೆ ಇಲ್ಲಿನ ಜಾಗದ ಅರಿವು ಇರುವುದಿಲ್ಲ. ಸೆಲ್ಫಿ-ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ತಮ್ಮ ಪ್ರಾಣಕ್ಕೆ ತಾವೇ ಮುಳ್ಳಾಗುತ್ತಿದ್ದಾರೆ. ಹಾಗಾಗಿ, ಜನ ಜಿಲ್ಲಾಡಳಿತ ಅಪಾಯದ ಸ್ಥಳಗಳಲ್ಲಿ ನಾಮಫಲಕ ಹಾಕಬೇಕು, ಇಲ್ಲ ಕಾವಲುಗಾರರನ್ನ ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಕಾಫಿನಾಡಲ್ಲಿ ಇಂತಹ ಹತ್ತಾರು ಸ್ಥಳಗಳಿವೆ. ಚಾರ್ಮಾಡಿಘಾಟ್, ಕಲ್ಲತ್‌ಗಿರಿ ಜಲಪಾತ, ಸಿರಿಮನೆ ಫಾಲ್ಸ್, ಅಂಬುತೀರ್ಥ, ಕುಕ್ಕುಡ ಫಾಲ್ಸ್, ಕಾಮೇನಹಳ್ಳಿ ಫಾಲ್ಸ್, ಹೊನ್ನಮ್ಮನ ಹಳ್ಳ, ಹೆಬ್ಬೆ ಜಲಪಾತ ಸೇರಿದಂತೆ ನೂರಾರು ಜಲಪಾತಗಳಿವೆ. ಒಂದಕ್ಕಿಂತ ಒಂದು ಸುಂದರವಾಗಿವೆ. ಜೊತೆಗೆ ಅಷ್ಟೆ ಅಪಾಯಕಾರಿ ತಾಣವೂ ಹೌದು. ಅದರಲ್ಲೂ ಚಾರ್ಮಾಡಿಘಾಟಿಯಲ್ಲಿ ಮಳೆಗಾಲದಲ್ಲಿ ಕಲ್ಲು ಬಂಡೆಗಳ ಮೇಲೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಪ್ರಾಣ ಕಳೆದುಕೊಂಡವರು ಇದ್ದಾರೆ. ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದವರ ಮೃತದೇಹ ಹುಡುಕಲು ಹರಸಾಹಸ ಪಟ್ಟ ಉದಾಹರಣೆಯೂ ಇದೆ.

ಒಟ್ಟಾರೆ, ಕಳೆದೊಂದು ತಿಂಗಳಿಂದ ಕಾಫಿನಾಡಲ್ಲಿ ಮಲೆನಾಡು ಭಾಗದಲ್ಲಿ ಆಗಾಗ್ಗೆ ಮಳೆಯಾಗ್ತಿದೆ. ನದಿಯ ಬಂಡೆಗಲ್ಲುಗಳ ಮೇಲೆ ಪಾಚಿ ಕಟ್ಟಿದೆ. ಅಂತಹ ಅಪಾಯಕಾರಿ ಬಂಡೆಗಳ ಮೇಲೆ ಯುವಕ ನಿಂತು ಸೆಲ್ಫಿ ತೆಗೆದುಕೊಳ್ಳವ ಹುಚ್ಚು ಸಾಹಸ ಮಾಡ್ತಾ ತಮ್ಮ ಪ್ರಾಣಕ್ಕೆ ತಾವೇ ಅಪಾಯಕಾರಿ ತಂದುಕೊಳ್ತಿದ್ದಾರೆ. ಇನ್ನಾದ್ರು ಇಂಥ ಹುಚ್ಚುತನವನ್ನ ಬಿಡಲಿ ಅನ್ನೋದು ನಮ್ಮ ಆಶಯ.

RELATED ARTICLES

Related Articles

TRENDING ARTICLES