ಕಮರ್ಷಿಯಲ್ ಸಿನಿಮಾಗಳ ನಡುವೆ ಇಂದಿನ ಪೀಳಿಗೆಗೆ ಅಲ್ಲಮ ಪ್ರಭುಗಳ ಅನುಭವ ಮಂಟಪದ ಪರಿಚಯ ಮಾಡಿಸೋ ಸಿನಿಮಾವೊಂದು ಬರ್ತಿದೆ. ಇತ್ತೀಚೆಗೆ ಆ ಐತಿಹಾಸಿಕ ದೃಶ್ಯಕಾವ್ಯದ ಟ್ರೈಲರ್ ಲಾಂಚ್ ಆಗಿದ್ದು, ಪ್ರಮೋದ್ ಮುತಾಲಿಕ್ ಹಾಗೂ ಲವ್ಲಿಸ್ಟಾರ್ ಪ್ರೇಮ್ ತಂಡಕ್ಕೆ ಬೆನ್ನು ತಟ್ಟಿದ್ದಾರೆ.
- ಅಲ್ಲಮ ಪ್ರಭುಗಳ ಚಿತ್ರಕ್ಕೆ ಮುತಾಲಿಕ್, ಪ್ರೇಮ್ ಸಾಥ್
- 12ನೇ ಶತಮಾನದ ಅನುಭವ ಮಂಟಪದ ಅನಾವರಣ
- ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಬಿಜ್ಜಳನ ವೈಭವ
- ಇಂದಿನ ಪೀಳಿಗೆ ಅರಿಯಲೇಬೇಕಾದ ವಚನಗಳ ಸಾರ..!
ಅಲ್ಲಮ ಅಂದಾಕ್ಷಣ ಟಿಎಸ್ ನಾಗಾಭರಣ ನಿರ್ದೇಶನದ ಡಾಲಿ ಧನಂಜಯ ನಟನೆಯ ಸಿನಿಮಾ ನೆನಪಾಗುತ್ತೆ. ಆದ್ರೆ ಶ್ರೀ ಅಲ್ಲಮ್ಮ ಪ್ರಭು ಅನ್ನೋ ಸಿನಿಮಾ ಬರ್ತಿದೆ. ಅದು ಕಂಪ್ಲೀಟ್ ಆಗಿ ಆ ಸಿನಿಮಾಗಿಂತ ವಿಭಿನ್ನವಾಗಿದೆ. ಕಾರಣ 12ನೇ ಶತಮಾನದ ಅನುಭವ ಮಂಟಪದ ಕಥೆಯನ್ನು ಸಾರುವ ಕಥಾನಕ ಇದಾಗಿದೆ. ರೀಸೆಂಟ್ ಆಗಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹಾಗೂ ಲವ್ಲಿಸ್ಟಾರ್ ಪ್ರೇಮ್, ಟ್ರೈಲರ್ನ ಲಾಂಚ್ ಮಾಡಿ, ತಂಡಕ್ಕೆ ಶುಭ ಕೋರಿದ್ರು. ನೂತನ ಫಿಲ್ಮ್ ಚೇಂಬರ್ ಅಧ್ಯಕ್ಷ ಭಾಮಾ ಹರೀಶ್ ಕೂಡ ಸಾಥ್ ನೀಡಿದ್ರು.
ಅನುಭವ ಮಂಟಪದ ಮೊದಲ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭುಗಳು ಅಂದೇ ತಮ್ಮ ಕಮ್ಮಟದಲ್ಲಿ ಸ್ತ್ರೀಗೆ ಸಮಾನತೆ ನೀಡಿದ್ರು. ಮಹಿಳಾ ಮೀಸಲಾತಿ ಹೆಸ್ರಲ್ಲಿ ಇಂದು ಪಾರ್ಲಿಮೆಂಟ್ನಲ್ಲೂ ಅದೇ ನಡೀತಿದೆ. ಅಂದಹಾಗೆ ಅಕ್ಕಮಹಾದೇವಿ ಅವ್ರಿಗೂ ಮಾತನಾಡೋಕೆ ಅವಕಾಶ ಕಲ್ಪಿಸಿದ್ರು. ಅಲ್ಲದೆ, ಬಸವಣ್ಣ, ಬಿಜ್ಜಳದೇವ ಸೇರಿದಂತೆ ಸಾಕಷ್ಟು ಪಾತ್ರಗಳು ನೊಡುಗರನ್ನ ಕಾಡಲಿದೆ. ಓದಿನಿಂದ ದೂರವಾಗ್ತಿರೋ ಇಂದಿನ ಪೀಳಿಗೆಗೆ ವಚನಗಳ ಸಾರವನ್ನು ಸಿನಿಮಾ ಮೂಲಕ ಉಣಬಡಿಸ್ತಿದ್ದಾರೆ ನಿರ್ದೇಶಕ ಶರಣ್ ಗದ್ವಾಲ್ ಹಾಗೂ ನಿರ್ಮಾಪಕ ಮಾಧವಾನಂದ.
ಸಚಿನ್ ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ ಪಂಡಿತ್, ಶೃಂಗೇರಿ ರಾಮಣ್ಣ, ಗಣೇಶ್ ರಾವ್ ಕೇಸರ್ಕರ್, ಸಂಜಯ್, ಯತಿರಾಜ್, ರಘು ಭಟ್ ಸೇರಿದಂತೆ ದೊಡ್ಡ ತಾರಾಗಣವಿದೆ. ಅದ್ರಲ್ಲೂ ಕಮಿರ್ಷಿಯಲ್ ಸಿನಿಮಾಗಳ ಮಧ್ಯೆ ನಟ, ನಿರ್ಮಾಪಕ ರಘು ಭಟ್ ಬಿಜ್ಜಳನ ಪಾತ್ರಕ್ಕೆ ಬಣ್ಣ ಹಚ್ಚಿ, ತಮ್ಮ ಸಿನಿಮೋತ್ಸಾಹವನ್ನು ಮೆರೆದಿದ್ದಾರೆ.
ಗಿರಿ ಸಿನಿಮಾಟೋಗ್ರಫಿ, ಕೆಂಪರಾಜು ಸಂಕಲನ, ಕುಮಾರ್ ಈಶ್ವರ್ ಸಂಗೀತವಿರೋ ಈ ಚಿತ್ರ ಬಸವಣ್ಣನವರ ವಚನಗಳು, ಗೀತ ಸಾಹಿತ್ಯದ ಮೂಲಕ ಇದೇ ಜೂನ್ 10ಕ್ಕೆ ತೆರೆಗೆ ಬರ್ತಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ