ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ಪಂಪಾ ಸರೋವರ ಮತ್ತು ಅಲ್ಲಿನ ಜಯಲಕ್ಷ್ಮೀ ದೇವಸ್ಥಾನ ಧ್ವಂಸಗೊಂಡಿದೆ. ಜೀರ್ಣೋದ್ಧಾರದ ಹೆಸರಿನಲ್ಲಿ ಧ್ವಂಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ತಂಗಡಗಿ ಹಾಗೂ ಇಕ್ಬಾಲ್ ಅನ್ಸಾರಿ ನೇತೃತ್ವದ ಕಾಂಗ್ರೆಸ್ ನಿಯೋಗ ಪಂಪಾ ಸರೋವರಕ್ಕೆ ಭೇಟಿ ನೀಡಿತು. ಈ ವೇಳೆ ಮಾತನಾಡಿದ ನಾಯಕರು ತಪ್ಪಿತಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವರ್ಷದಿಂದ ಪಂಪಾ ಸರೋವರದಲ್ಲಿ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದೆ. ಸಾರಿಗೆ ಸಚಿವ ಬಿ.ಶ್ರೀರಾಮುಲು ಸುಮಾರು 3 ಕೋಟಿ ರೂಪಾಯಿ ಸ್ವಂತಃ ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತಿರೋದಾಗಿ ಹೇಳಿಕೊಂಡಿದ್ದರು. ಆದ್ರೆ, ಪುರಾತತ್ವ ಇಲಾಖೆ ಮೂಲ ಸ್ಮಾರಕಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿ ಮಾಡಲಾಗುತ್ತೆ ಅಂತಾ ಹೇಳಿತ್ತು. ಆದ್ರೆ, ಇದೀಗ ಇಡೀ ದೇವಸ್ಥಾನ ಧ್ವಂಸಗೊಂಡಿದೆ. ಜಯಲಕ್ಷ್ಮೀ ದೇವಿಯ ಮೂಲ ವಿಗ್ರಹ ಸ್ಥಳಾಂತರಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯನ್ನು ಸ್ಥಳೀಯರು ತರಾಟೆ ತೆಗೆದುಕೊಂಡಾಗ ಇಲ್ಲಿ ತಪ್ಪು ನಡೆದಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.ಜೊತೆಗೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಭರವಸೆ ನೀಡಿದರು.
ಪೌರಾಣಿಕ ಪ್ರಸಿದ್ಧ ಪಂಪಾ ಸರೋವರ ಮತ್ತು ಜಯಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಆಗುವ ಬದಲಿಗೆ ಮರು ನಿರ್ಮಾಣ ಆಗಿವೆ. ಜೊತೆಗೆ ನಿಧಿ ಶೋಧನೆ ಯತ್ನ ನಡೆದಿದ್ದು, ಇದರ ವಿರುದ್ಧ ಹೋರಾಟಕ್ಕೆ ಇದೀಗ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.