ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2021ರಲ್ಲಿ ರೇಸ್ ಕೋರ್ಸ್ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಐತಿಹಾಸಿಕ ದಾಖಲೆ ಬರೆದಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 50 ಸಾವಿರ ಯೋಗಪಟುಗಳು ಏಕಕಾಲಕ್ಕೆ ಯೋಗ ಮಾಡಿದ್ರು. ಇದು ದಾಖಲೆಯ ಪುಟಗಳಲ್ಲಿ ದಾಖಲಾಗಿತ್ತು. ಈ ಬಾರಿ ಬರೋಬ್ಬರಿ ಲಕ್ಷಕ್ಕೂ ಹೆಚ್ಚು ಜನರಿಂದ ಯೋಗ ಮಾಡಿಸಲು ಸಾಂಸ್ಕ್ರತಿಕ ನಗರಿ ಮೈಸೂರು ಸಜ್ಜಾಗುತ್ತಿದೆ. ಯೋಗ ದಿನಾಚರಣೆ ಮೈಸೂರಿಗರಿಗೆ ಮತ್ತಷ್ಟು ವಿಶೇಷ ದಿನವಾಗುತ್ತಿದೆ. ಯಾಕಂದ್ರೆ, ಈ ಬಾರಿ ಯೋಗ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ.
ಶನಿವಾರವಷ್ಟೇ ಮೋದಿ ಮೈಸೂರಿಗೆ ಆಗಮಿಸುವ ಬಗ್ಗೆ ಪ್ರಧಾನಿ ಕಚೇರಿಯಿಂದ ಖಚಿತವಾಗಿದೆ. ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ರವಿಕುಮಾರ್‌ಗೆ ಪ್ರಧಾನಿ ಕಾರ್ಯಾಲಯ ಪತ್ರ ರವಾನಿಸಿದೆ.ಅಲ್ಲದೆ ಸ್ಥಳೀಯ ಸಂಸದ ಪ್ರತಾಪಸಿಂಹ ಕೂಡ ಮೋದಿಗೆ ಆಹ್ವಾನ ನೀಡಿದ್ದರು. ಇದೀಗ ಮೋದಿ ಮೈಸೂರಿಗೆ ಬರುವುದು ಖಚಿತವಾಗಿದ್ದು, ಅವರು ಬರುವ ವೇಳೆ ಮುಜುಗರ ಮಾಡಬೇಡಿ ಅಂತಾ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
2014ರ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಮೋದಿ ಮೈಸೂರಿಗೆ ಬಂದಿದ್ದರು. ಈ ವೇಳೆ ಮೈಸೂರನ್ನು ಪ್ಯಾರಿಸ್ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಭರವಸೆ ನೀಡಿದ್ದರು. ಅದನ್ನು ಮೋದಿ ಬಂದಾಗ ಪ್ರಶ್ನಿಸುವಂತೆಯೂ ವಿಶ್ವನಾಥ್ ಒತ್ತಾಯಿಸಿದ್ದಾರೆ.