ಶಿವಮೊಗ್ಗ : ಮಸೀದಿ, ಪ್ರಾರ್ಥನಾ ಮಂದಿರಗಳು ಅವರಾಗಿಯೇ ಎಲ್ಲಿ ಕಟ್ಟಿಕೊಂಡಿದ್ದಾರೋ, ಅವುಗಳನ್ನು ನಾವು ಮುಟ್ಟಲು ಕೂಡ ಹೋಗಲ್ಲ ಎಂದು ಶಿವಮೊಗ್ಗದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಇಡೀ ಶುಭಶ್ರೀ ಸಮುದಾಯ ಭವನ ಕೇಸರಿಮಯವಾಗಿದೆ. ಸದ್ಯದಲ್ಲೇ ಇಡೀ ದೇಶವೇ ಕೇಸರಿಮಯವಾಗಲಿದೆ. ಕೇಸರಿಮಯವೆಂದರೆ, ಕೇವಲ ಚುನಾವಣೆ ಗೆಲ್ಲುವುದಲ್ಲ ಎಂದರು.
ಅದುವಲ್ಲದೇ, ಮೊನ್ನೆ ಕಾಶಿಯಲ್ಲಿರುವ ಮಸೀದಿ ಎನ್ನಲಾದ ಸರ್ವೆ ವರದಿ ನೀಡುವಂತೆ ಕೋರ್ಟ್ ಆದೇಶ ಮಾಡಿದೆ. ಕೋರ್ಟ್ ಆದೇಶ ಮಾಡಿದ್ದ ವೇಳೆ, ನಾನು ಕಾಶಿ ದೇವಾಲಯದಲ್ಲಿಯೇ ಇದ್ದೆ. ಹಿಂದೂಸ್ಥಾನದಲ್ಲಿ ಅಲ್ಲೊಬ್ಬರು, ಇಲ್ಲೊಬ್ಬರು, ಬಾಲ ಬಿಚ್ಚುವ ಕೆಲಸ ಮಾಡುತ್ತಿದ್ದಾರೆ. ಕಾಶಿಯ ಮಸೀದಿ ಪಕ್ಕದಲ್ಲಿಯೇ ನಂದಿ ಇದೆ. ನಂದಿ ಎದುರು ಭಾಗದಲ್ಲಿ ಈಶ್ವರ ಲಿಂಗ ಇರಲೇ ಬೇಕು. ಆದರೆ, ಅಲ್ಲಿ ಮಸೀದಿ ನಿರ್ಮಿಸಲಾಗಿದೆ. ಕಾಶಿಯ ಜ್ಞಾನವಾಪಿ ಸ್ಥಳದಲ್ಲಿ ಲಿಂಗ ಕಾಪಾಡಲು, ನಾಗರಹಾವು ಇದೆ ಎಂದು ಹೇಳಿದರು.
ಇನ್ನು, ಅಸಾವುದ್ದೀನ್ ಓವೈಸಿ, ಔರಂಗಜೇಬನ ಗೋರಿಗೆ ಹೋಗಿ ಚಾದರ್ ಸಲ್ಲಿಸಿ, ಪ್ರಾರ್ಥಿಸುತ್ತಾರೆ. ಒಬ್ಬ ದೇಶ ದ್ರೋಹಿಯ ಗೋರಿಗೆ ಹೋಗಿ ಪ್ರಾರ್ಥಿಸುವುದು ಎಷ್ಟು ಸರಿ ಮಸೀದಿ, ಪ್ರಾರ್ಥನಾ ಮಂದಿರಗಳು ಅವರಾಗಿಯೇ ಎಲ್ಲಿ ಕಟ್ಟಿಕೊಂಡಿದ್ದಾರೋ, ಅವುಗಳನ್ನು ನಾವು ಮುಟ್ಟಲು ಕೂಡ ಹೋಗಲ್ಲ. ಆದರೆ, ದೇವಾಲಯಗಳನ್ನು ಒಡೆದು ಹಾಕಿ, ಮಸೀದಿ ನಿರ್ಮಾಣ ಮಾಡಿದ್ದಾರೋ, ಅವುಗಳನ್ನು ಮಾತ್ರ ಪುನಃ ದೇವಾಲಯ ಮಾಡುತ್ತಿದ್ದೇವೆ. ಶ್ರೀರಂಗಪಟ್ಟಣದಲ್ಲಿ ಮಸೀದಿ ಕೆಳಗೆ ಆಂಜನೇಯನ ಮೂರ್ತಿ ದೊರೆತಿದೆ. ಇದು ಎಲ್ಲಿ ಎಂದು ಪ್ರಶ್ನಿಸಿದರೆ, ಬೇರೆಡೆಗೆ ಸ್ಥಳಾಂತರಿಸಿದ್ದೇವೆ ಎಂದು ಹೇಳುತ್ತಾರೆ ಎಂದರು.
ನಂತರ ಹಿಜಾಬ್ ಬಗ್ಗೆ ಮಾತನಾಡಿದ ಅವರು, ಹಿಜಾಬ್ ಧರಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಹಿಂದೆ, ರಾಜ್ಯ ಕಾಂಗ್ರೆಸ್ ಇದೆ. ನಾವು ಹಲಾಲ್ ಮಾಂಸ ತಿನ್ನಲ್ಲ. ನಾವು ಜಟ್ಕಾ ಮಾಂಸ ತಿನ್ನುತ್ತೇವೆ. ಇದಕ್ಕೆ ನಾವು ತಯಾರಿ ಮಾಡಿಕೊಂಡಿದ್ದೇವೆ. ಹಿಜಾಬ್, ಕೇಸರಿ ಧರಿಸಿ ಶಾಲೆಗೆ ಹೋಗಲ್ಲ ಎನ್ನುವವರಿಗೆ ಕೋರ್ಟ್ ಆದೇಶ ನೀಡಿದೆ. ಆದರೂ, ಹಿಜಾಬ್ ಧರಿಸಿ ಶಾಲಾ, ಕಾಲೇಜುಗಳಿಗೆ ತೆರಳಲು ಪ್ರಚೋದಿಸಲಾಗಿದೆ. ಕೋರ್ಟ್ ಮತ್ತು ಸಂವಿಧಾನ ವಿರೋಧಿಸಿ, ಯಾರು ನಡೆದುಕೊಳ್ಳುತ್ತಾರೋ ಅವರು ದೇಶದ್ರೋಹಿಗಳು. ನಾವೆಲ್ಲರೂ, ದೇಶ ಮತ್ತು ಸಂಸ್ಕೃತಿ ಉಳಿಸಬೇಕಿದೆ. ವಯಸ್ಸಾದವರಿಗೆ, ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಆಜಾನ್ ಕೂಗುವ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಆದರೆ, ಇದಕ್ಕೆ ಕಾಂಗ್ರೆಸ್ ವಿರೋಧಿಸುತ್ತಿದೆ. ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿ ಎಂದು ಅವರಿಗೆ ಸಪೋರ್ಟ್ ಮಾಡುತ್ತಿದೆ ಎಂದು ಹೇಳಿದರು.
ಎಂ.ಬಿ. ಪಾಟೀಲ್ ಹಾಗೂ ಡಿ.ಕೆ. ಶಿವಕುಮಾರ್ ವಿಚಾರವಾಗಿ ಮಾತನಾಡಿದ ಅವರು, ಎಂ.ಬಿ. ಪಾಟೀಲ್ ಬಗ್ಗೆ ಡಿ.ಕೆ. ಶಿವಕುಮಾರ್ಗೆ ನಂಬಿಕೆ ಇಲ್ಲ ಎಂದರೆ ಹೇಗೆ…..!? ನಮ್ಮ ಅಶ್ವಥ್ ನಾರಾಯಣ್, ಎಂ.ಬಿ. ಪಾಟೀಲ್ ರಹಸ್ಯ ಸಭೆ ನಡೆಸಿದರು ಎಂದು ಡಿ.ಕೆ.ಶಿ. ಹೇಳುತ್ತಾರೆ. ಅವರ ಮುಖಂಡರ ಮೇಲೆಯೇ ಡಿ.ಕೆ.ಶಿಗೆ ನಂಬಿಕೆ ಇಲ್ಲವಾಗಿದೆ. ಕಾಂಗ್ರೆಸ್ನಲ್ಲಿ ಸುಳ್ಳಿನ ಸರದಾರರು. ಇವರು ಪ್ರಿಯಾಂಕ ಗಾಂಧಿಗೆ ಹೋಗಿ, ಕರ್ನಾಟಕ ರಾಜ್ಯದಿಂದ ಚುನಾವಣೆಗೆ ನಿಲ್ಲಿ ಎಂದು ಕಾಂಗ್ರೆಸ್ನವರು ಮನವಿ ಮಾಡಿಕೊಳ್ಳುತ್ತಿದ್ದಾರೆ. ನಂಗೂ ಆಸೆ ಇದೆ ಪ್ರಿಯಾಂಕ ಗಾಂಧಿ ಇಲ್ಲಿ ಬಂದು ಚುನಾವಣೆ ನಿಲ್ಲಬೇಕು. ಉತ್ತರ ಪ್ರದೇಶದ ಚುನಾವಣೆಗೆ ಪ್ರಿಯಾಂಕ ಗಾಂಧಿ, ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗಿ ಹೋಯ್ತು ಎಂದು ಹೇಳಿದರು.