ಹುಬ್ಬಳ್ಳಿ : ಧರ್ಮ ಧರ್ಮಗಳ ಮಧ್ಯೆ ಕೋಮು ಸಂಘರ್ಷ ಜೋರಾಗಿದೆ.ಈ ಮಧ್ಯೆ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಿದ್ದಂತೆ ಎಂಬಂತೆ ಇಲ್ಲೊಂದು ದರ್ಗಾದಲ್ಲಿ ಹಿಂದೂ ಮಹಿಳೆ ಪೂಜೆ ಮಾಡುತ್ತಾ ಬಂದಿದ್ದಾರೆ.ಇವರ ಸಾಮರಸ್ಯದ ನಡೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ.
ದರ್ಗಾದಲ್ಲಿ ಪೂಜೆ ಮಾಡುತ್ತಿರುವ ಈ ಹಿಂದೂ ಮಹಿಳೆಯ ಹೆಸರು ಹನಮವ್ವ ಗುಡಗುಂಟಿ.ಇವರು ಹುಬ್ಬಳ್ಳಿಯ ಕೇಶ್ವಾಪುರದ ರಾಮನಗರ ದೂದಪಿರಾ ದರ್ಗಾದಲ್ಲಿ ಸೇವೆ ಸಲ್ಲಿಸುತ್ತಾ ಸುದ್ದಿ ಆಗಿದ್ದಾರೆ.ಕಳೆದ 62 ವರ್ಷಗಳಿಂದ ಗುಡಗುಂಟಿ ಮನೆತನದವರು ಈ ದರ್ಗಾದಲ್ಲಿ ಪೂಜೆ ಸಲ್ಲಿಸುತ್ತಿರುವುದು ವಿಶೇಷ. ಮುಸ್ಲಿಂ ಸಮುದಾಯದವರು ಕೂಡ ಇವರಿಗೆ ಅಷ್ಟೇ ಸಪೋರ್ಟ್ ಮಾಡಿದ್ದಾರೆ.ಮುಸ್ಲಿಮರು ಇಲ್ಲಿ ನಮಾಜ್ ಮಾಡಿ ಹೋಗುತ್ತಾರೆ. ಈ ಮಧ್ಯೆಯೇ ಪೂಜೆ ಮಾಡುತ್ತಿರುವ ಹನಮವ್ವ ಅನೇಕ ವರ್ಷಗಳಿಂದ ಈ ದರ್ಗಾಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.
ಈ ದರ್ಗಾದಲ್ಲಿ ಒಂದು ಕಡೆ ಹಿಂದೂಗಳು ಪೂಜೆ ಮಾಡುತ್ತಿದ್ದರೆ.ಇನ್ನೊಂದೆಡೆ ಮುಸ್ಲಿಮರು ನಮಾಜ್ ಮಾಡುತ್ತಾರೆ. ಹೀಗೆ ಎಲ್ಲ ಧರ್ಮದವರು ಭಾವೈಕ್ಯತೆಯಿಂದ ಸಾಮರಸ್ಯದಿಂದ ಸಮಾಜದಲ್ಲಿ ಶಾಂತಿ ನೆಲೆಸುವಂತಹ ಇಂತಹ ಭಾವೈಕ್ಯತೆಯ ಕೇಂದ್ರಗಳು ಹೆಚ್ಚಾಗಲಿ ಎಂದು ಎಲ್ಲರೂ ಪ್ರತಿ ವರ್ಷ ಸಂದಲ್ ಮತ್ತು ಉರುಸು ಮಾಡುತ್ತಿದ್ದಾರೆ.
ಒಟ್ಟಿನಲ್ಲಿ ಜಾತಿ ಧರ್ಮ ಎಂದು ಕಚ್ಚಾಡುತ್ತಿರುವವರ ಮಧ್ಯೆ ಈ ದರ್ಗಾ, ನಾಡಿನ ಜನತೆಗೆ ಸಾಮರಸ್ಯದ ಸಂದೇಶ ಸಾರುತ್ತಿದೆ.