Saturday, April 20, 2024

ಕಲ್ಯಾಣ ಕರ್ನಾಟಕ ಹೆಬ್ಬಾಗಿಲಿನಿಂದ ಈಡಿಗರ ರಣಕಹಳೆ..!

ಕಲಬುರಗಿ : ಆರ್ಯ ಈಡಿಗ ಸಮಾಜದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ಚಿಂಚೋಳಿಯಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಆರ್ಯ ಈಡಿಗ ಸಮಾಜ ಹಮ್ಮಿಕೊಂಡಿರುವ ಪಾದಯಾತ್ರೆಗೆ ಚಿಂಚೋಳಿ ಪಟ್ಟಣದ ಶ್ರೀ ಹಾರಕೂಡ ಕಲ್ಯಾಣ ಮಂಟಪದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶವನ್ನ ಶ್ರೀ ಪ್ರಣವಾನಂದ ಸ್ವಾಮೀಜಿ ಹಾಗೂ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಉದ್ಘಾಟಿಸಿದರು. ನಂತರ ಪವರ್ ಟಿವಿ ಜೊತೆ ಮಾತನಾಡಿದ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ, ಆರ್ಯ ಈಡಿಗ ಸಮುದಾಯಕ್ಕೆ ಸರ್ಕಾರದಿಂದ ಸಾಕಷ್ಟು ಅನ್ಯಾಯವಾಗಿದೆ. ನಮ್ಮ ಸಮಾಜದ ಕುಲಕಸುಬು ಸೇಂಧಿ ಇಳಿಸಿ ಮಾರಾಟ ಮಾಡುವುದಾಗಿದೆ. ಹಾಗಾಗಿ ನಮ್ಮ ಸೇಂಧಿ ನಮ್ಮ ಹಕ್ಕು ಅಂತಾ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಇನ್ನೂ ಸಮಾಜದ ಧರ್ಮಗುರು ಬ್ರಹ್ಮಶ್ರೀ ನಾರಾಯಣ ಶ್ರೀ ಗುರುಗಳ ಹೆಸರಿನಲ್ಲಿ ನಿಗಮ ಮಂಡಳಿ ಸ್ಥಾಪನೆ ಮಾಡಿ ಸಮಾಜದ ಅಭಿವೃದ್ಧಿಗಾಗಿ 500 ಕೋಟಿ ರೂ.ಮೀಸಲಿಡಬೇಕು ಅಂತಾ ಆಗ್ರಹಿಸಿದರು. ಇದಲ್ಲದೆ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಮೇಲೆ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ನಮ್ಮ ಹೋರಾಟವನ್ನ ಸರ್ಕಾರ ಸಿಂಪಲ್ ಆಗಿ ತೆಗೆದುಕೊಳ್ಳಬಾರದು ಅಂತಾ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಇದೇ ವೇಳೆ ರಾಮನಗರ ಜಿಲ್ಲೆಯ ಸೋಲೂರಿನ ಶ್ರೀ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ ಪಾದಯಾತ್ರೆ ಮತ್ತು ಹೋರಾಟ ಯಶಸ್ಸು ಕಾಣಲಿ ಅಂತಾ ಶುಭ ಹಾರೈಸಿದರು.

ಅದುವಲ್ಲದೇ, ಸಮಾವೇಶದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಚಿಂಚೋಳಿ ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ್ ಸೇರಿ ಸಮಾಜದ ನೂರಾರು ಜನ ಭಾಗವಹಿಸಿದ್ದರು.ಗುರುವಾರ ರಾತ್ರಿ ನಿಡಗುಂದ ಗ್ರಾಮದಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿ ವಾಸ್ಯವ್ಯ ಹೂಡಲಿದ್ದಾರೆ. ಪ್ರತಿದಿನ 18 ರಿಂದ 20 ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡು ಶುಕ್ರವಾರ ಸೇಡಂ ಪಟ್ಟಣಕ್ಕೆ ಪಾದಯಾತ್ರೆ ತಲುಪಲಿದೆ. ಇನ್ನೂ ಕೊನೆ ದಿನ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸೋ ಪಾದಯಾತ್ರೆ, ಸಮಾಜದ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ.ಪಾದಯಾತ್ರೆಗೆ ಚಾಲನೆ ನೀಡುವ ಸಮಾವೇಶದಲ್ಲಿ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್, ಶ್ರೀಗಳ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದ್ದು, ಈಗಾಗಲೇ ನಾಲ್ಕು ವಿಭಾಗಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಮೇಲೆ ನಾಲ್ಕು ವಸತಿ ನಿಲಯಗಳ ಸ್ಥಾಪನೆಗೆ ಈಗಾಗಲೇ ಸಿಎಂ ಬೊಮ್ಮಾಯಿ‌ ನಿರ್ಧಾರ ಕೈಗೊಂಡಿದ್ದಾರೆ ಅಂತಾ ಹೇಳಿದರು. ಆರ್ಯ ಈಡಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ಸರ್ಕಾರದ ಮೇಲೆ ಒತ್ತಡ ಹಾಕುವುದಾಗಿ ಗುತ್ತೇದಾರ್ ಹೇಳಿದರು.

ಅದೇನೇ ಇರಲಿ, ರಾಜ್ಯ ರಾಜಕೀಯದಲ್ಲಿ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರ್ಯ ಈಡಿಗ ಸಮಾಜದ ಅನೇಕ ಶಾಸಕರಿದ್ದು, ಎಲ್ಲ ಶಾಸಕರು ಒಟ್ಟುಗೂಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಆರ್ಯ ಈಡಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಪ್ರಣವಾನಂದ ಶ್ರೀಗಳು ಒತ್ತಾಯಿಸಿದ್ದು, ಇದರ ಭಾಗವಾಗಿ ಶ್ರೀಗಳು ಸಹ ಪಾದಯಾತ್ರೆ ಕೈಗೊಂಡಿದ್ದು ಮತ್ತಷ್ಟು ಆನೆ ಬಲ ಬಂದಂತಾಗಿದೆ.

RELATED ARTICLES

Related Articles

TRENDING ARTICLES