ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ನಿರೀಕ್ಷೆಯಂತೆ ರಾಜಕೀಯ ಪ್ರವೇಶಿಸುತ್ತಿದ್ದು, ಇಂದು ಆಪ್‌ಗೆ ಸೇರ್ಪಡೆಯಾಗಲಿದ್ದಾರೆ.
ತಮ್ಮ ಪೊಲೀಸ್ ಇಲಾಖೆಯ 32 ವರ್ಷಗಳ ಸೇವೆ ಮಾಡಿ ನಿವೃತ್ತಿಗೂ ಹೆಚ್ಚೂ ಕಡಿಮೆ ಎರಡು ವರ್ಷ ಬಾಕಿ ಇರುವಾಗಲೇ ಹೊರಬಂದಿರುವ ಅವರು ರಾಜಕೀಯದಲ್ಲಿ ಗುರುತಿಸಿಕೊಂಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಬಹುತೇಕ ತಾವು ಬೆಳೆದ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದಲೇ ಆಪ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ.
ಇಂದು ಮಧ್ಯಾಹ್ನ 1 ಗಂಟೆಗೆ ನವದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪಕ್ಷದ ಹಿರಿಯ ನಾಯಕರೂ ಆಗಿರುವ ದೆಹಲಿಯ ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಮತ್ತು ಕರ್ನಾಟಕ ಉಸ್ತುವಾರಿ ದಿಲೀಪ್ ಪಾಂಡೆ ಸಮ್ಮುಖದಲ್ಲಿ ಭಾಸ್ಕರ್ ರಾವ್ ಅವರು ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ಹೊರಬಿದ್ದಿದೆ.
ಬಿಜೆಪಿ ಜತೆ ನಿಕಟ ಸಂಪರ್ಕ ಹೊಂದಿದ್ದ ಅವರು ಆ ಪಕ್ಷ ಸೇರ್ಪಡೆಗೆ ಒಲವು ತೋರಿದರೂ ಬಸವನಗುಡಿ ಟಿಕೆಟ್ ನೀಡುವುದಕ್ಕೆ ಅಡಚಣೆ ಎದುರಾಯಿತು. ಸ್ಥಳೀಯ ಶಾಸಕರಾಗಿರುವ ರವಿಸುಬ್ರಮಣ್ಯ ಅವರನ್ನು ಬಿಟ್ಟು ಮತ್ತೊಬ್ಬರಿಗೆ ಟಿಕೆಟ್ ನೀಡುವ ಅನಿವಾರ್ಯತೆ ಬಿಜೆಪಿಗೆ ಇಲ್ಲ. ಹೀಗಾಗಿ ಆಪ್ ಸೂಕ್ತ ಎಂಬ ನಿಲುವಿಗೆ ಭಾಸ್ಕರ್ ರಾವ್ ಬಂದರು ಎನ್ನಲಾಗಿದೆ.