ಬೆಂಗಳೂರು: ನಿನ್ನೆ ಶಿವಮೊಗ್ಗದಲ್ಲಿ ಶವ ಮೆರವಣಿಗೆ ನಡೆದಿದೆ. ಭಾನುವಾರ ರಾತ್ರಿ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಈಗಾಗಲೇ ಕೊಲೆ ಮಾಡಿದ್ದು ನಾನುಕಂಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದ್ಯ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಮೂರು ದಿನಗಳಲ್ಲಿ ಮೂರು ಕೊಲೆ ಆಗಿದೆ. ಈಶ್ವರಪ್ಪ, ಆರಗ ಇಬ್ಬರು ಶಿವಮೊಗ್ಗ ಜಿಲ್ಲೆಯವರು. 144 ಸೆಕ್ಷನ್ ಜಾರಿ ಇದ್ರು ಪೊಲೀಸ್ ಮೆರವಣಿಗೆಗೆ ಹೇಗೆ ಅವಕಾಶ ಕೊಟ್ರು? ಎಂದು ಪ್ರಶ್ನೆ ಮಾಡಿದರು.
ಅಲ್ಲದೇ, ಈಶ್ವರಪ್ಪ, ರಾಘವೇಂದ್ರ ಬೇರೆ ನಾಯಕರು ಮೆರವಣಿಗೆಯಲ್ಲಿ ಇದ್ರು. ಸ್ಟೇಟ್ ಸ್ಪಾನ್ಸರ್ ಮೆರವಣಿಗೆ ಇದು. ಜನರು ಕಲ್ಲು ತೂರಾಡುತ್ತಾರೆ, ಗಲಾಟೆ ಆಗುತ್ತೆ. 144 ಸೆಕ್ಷನ್ ಇದೆ. ಒಬ್ಬ ಮಂತ್ರಿ ಮೆರವಣಿಗೆಯಲ್ಲಿ ಭಾಗಿಯಾಗ್ತಾರೆ. ಬಿಜೆಪಿ ಸರ್ಕಾರ ಇದೆ ಇದನ್ನು ತಡೆಯಬೇಕಿತ್ತು. ಸಾರ್ವಜನಿಕ ಆಸ್ತಿಪಾಸ್ತಿ ನಾಶವಾಗಿದೆ ಎಂದರು.
ಇನ್ನು ಆರ್ಎಸ್ಎಸ್ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರೊಟ್ಟಿಗೆ ಆಯುಧ ಹಿಡಿದು ಮೆರವಣಿಗೆ ಮಾಡ್ತಾರೆ. ಹಾಗಾದ್ರೆ ಸರ್ಕಾರದ ಆದೇಶಕ್ಕೆ ಮರ್ಯಾದೆ ಎಲ್ಲಿದೆ? ಅಲ್ಲಿ ನಿನ್ನೆ ಆಗಿರುವ ಎಲ್ಲ ಘಟನೆಗೆ ಸರ್ಕಾರವೇ ಕಾರಣ. ಈಶ್ವರಪ್ಪ, ರಾಘವೇಂದ್ರ ಅವರೇ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.