Thursday, March 28, 2024

ರೋಗಿಗೆ ಅಳವಡಿಸಲಾಯಿತು ಹಂದಿಯ ಹೃದಯ..!

ಹೃದಯ ಮಾನವನ ದೇಹದಲ್ಲಿ ಬಹು ಮುಖ್ಯವಾದ ಅಂಗ, ಈ ಅಂಗಕ್ಕೆ ಏನಾದ್ರು ಸಣ್ಣ ಪ್ರಮಾಣದ ತೊಂದರೆ ಉಂಟಾದ್ರೆ ಮುಗಿತು, ಆ ತೊಂದರೆಗೆ ಒಳಪಟ್ಟ ವ್ಯಕ್ತಿ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ ಜಗತ್ತಿನಾದ್ಯಂತ ಸಾಕಷ್ಟು ಜನರು ತಮ್ಮ-ತಮ್ಮ ಹೃದಯದ ಬಗ್ಗೆ ಕಾಳಜಿ ವಹಿಸುವುದರ ಕುರಿತು ಆಲೋಚನೆಯನ್ನ ಮಾಡುತ್ತಾರೆ. ತಿಂಗಳಿಗೊಮ್ಮೆ ಹೃದ್ರೋಗ ತಜ್ಞರ ಬಳಿ ಹೋಗಿ ಹೃದಯ ತಪಾಸಣೆಯನ್ನ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಈ ರೀತಿ ಬಹುತೇಕರು ಹೃದಯದ ಬಗ್ಗೆ ಕಾಳಜಿ ವಹಿಸೋದಕ್ಕೆ ಪ್ರಮುಖವಾದ ಕಾರಣ ಅಂದ್ರೆ, ನಮ್ಮ ಹೃದಯದ ಸೂಕ್ಷ್ಮತೆ, ಹಾಗು ಅದರ ಪ್ರಾಮುಖ್ಯತೆ.. ಹೃದಯ ಮಾನವನ ದೇಹದಲ್ಲಿ ಪ್ರಮುಖ ಅಂಗವಾಗಿರೋದರ ಜೊತೆಗೆ ಇಡೀ ದೇಹದ ಕಾರ್ಯ ಕ್ಷಮತೆ ಹೃದಯದ ಮೇಲೆಯೇ ಅವಲಂಬಿತವಾಗಿರುತ್ತದೆ. ಅದೇ ರೀತಿ ಇಡೀ ದೇಹಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗ ಕೂಡ ಹೃದಯವೇ ಆಗಿದೆ.

ಇದೇ ಕಾರಣಕ್ಕೆ ಹೃದಯ ಸಂಬಂಧಿ ಕಾಯಿಲೆಯ ಬಗ್ಗೆ ವೈದ್ಯರು ಅತ್ಯಂತ ಎಚ್ಚರದಿಂದ ಇರಲು ಜನ ಸಾಮಾನ್ಯರಿಗೆ ಸಲಹೆಯನ್ನ ನೀಡುತ್ತಾರೆ, ಆದ್ರೆ ಯಾರು ಎಷ್ಟೇ ಹೃದಯ ಸಂಬಂಧವಾದ ಚಿಕಿತ್ಸೆಯನ್ನ ಪಡೆದ್ರು ಕೂಡ ಸಾಕಷ್ಟು ಜನರಿಗೆ ಹೃದಯ ಸಂಬಂಧಿ ಕಾಯಿಲೆಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಇದರಲ್ಲಿ ಕೆಲ ಕಾಯಿಲೆಗಳಿಗೆ ದೀರ್ಘಕಾಲದ ಸೂಕ್ತವಾದ ಚಿಕಿತ್ಸೆಯನ್ನ ನೀಡಿ ಹೃದಯ ಸಂಬಂಧದ ಸಮಸ್ಯೆಯನ್ನ ಬಗೆ ಹರಿಸಬಹುದು, ಆದರೆ ಕೆಲವೊಂದು ಕಾಯಿಲೆಗಳ ವಿಚಾರದಲ್ಲಿ ಹಾಗಾಗೋದಿಲ್ಲ, ಕೆಲವೊಮ್ಮ ಹೃದಯ ಕಸಿಯ ಮೂಲಕ ಚಿಕಿತ್ಸೆಯನ್ನ ನೀಡ ಬೇಕಾಗುತ್ತದೆ. ಆದ್ರೆ ಹೀಗೆ ಹೃದಯ ಕಸಿ ಮಾಡೋದಕ್ಕೆ ಸಾಕಷ್ಟು ಜನ ತಮ್ಮ ಸಾವಿನ ನಂತರ ದೇಹ ದಾನ ಮಾಡಬೇಕಾದ ಅನಿವಾರ್ಯತೆ ಇರುತ್ತದೆ ಆದ್ರೆ ಈ ಬಗ್ಗೆ ಜಾಗೃತಿ ಇಲ್ಲದವರು ದೇಹದಾನ ಮಾಡೋದಕ್ಕೆ ತಯಾರಿರೋದಿಲ್ಲ. ಹೀಗಾಗಿ ಸಾಕಷ್ಟು ಜನ ಇದೇ ಕಾರಣದಿಂದಾಗಿ ಸರಿಯಾಗಿ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿದ್ದಾರೆ.

ಇದೇ ಕಾರಣಕ್ಕೆ ಹಲವು ದಶಕಗಳಿಂದ ಹೃದಯ ಕಸಿಯ ಬಗ್ಗೆ ವೈದ್ಯಲೋಕ ಸಾಕಷ್ಟು ವರ್ಷಗಳಿಂದ ಅಧ್ಯಯನ ನಡೆಸುತ್ತಾ ಬಂದಿತ್ತು. ಆದ್ರೆ ಇದಕ್ಕೆ ಹೇಳೊಕೊಳ್ಳುವಂತ ದೊಡ್ಡ ಯಶಸ್ಸು ಸಿಗಲಿಲ್ಲ. ಆದ್ರೆ ಕಳೆದ ಕೆಲ ತಿಂಗಳುಗಳ ಹಿಂದೆ ವೈದ್ಯ ಲೋಕ ಅಚ್ಚರಿ ಪಡುವ ಘಟನೆಯೊಂದು ನಡೆದಿತ್ತು. ಹೌದು,ಕಳೆದ ವರ್ಷ ಅಕ್ಟೋಬರ್​ನಲ್ಲಿ​ ವೈದ್ಯರು ಯಶಸ್ವಿಯಾಗಿ ಹಂದಿಯ ಕಿಡ್ನಿಯನ್ನ ಸಾಯುವ ಹಂತದಲ್ಲಿರುವ ರೋಗಿಗೆ ಅಳವಡಿಸಿದ್ದರು ಇದರ ಸಹಾಯದಿಂದ ಆ ರೋಗಿ ಎರಡು ದಿನಗಳ ಕಾಲ ಆರೋಗ್ಯವಾಗಿದ್ದರು. ಆದ್ರೆ ಬೇರೆ ಬೇರೆ ಕಾಯಿಲೆಗಳ ಸಮಸ್ಯೆಯಿಂದ ಆ ಮಹಿಳೆ ಬಳಲುತ್ತಿದ್ದರಿಂದ ಆಕೆ ಅಸು ನೀಗಿದರು. ಆದ್ರೆ ಈ ಬಗ್ಗೆ ಅವತ್ತು ಮಾಹಿತಿ ನೀಡಿದ್ದ ವೈದ್ಯರು ಹಂದಿಗಳ ಜೆನೆಟಿಕ್​ ಲೆವೆಲ್​​ಗಳಲ್ಲಿ ಮಾನವನಿಗೆ ಹೋಲಿಕೆಅಯಾಗುವ ರೀತಿಯಲ್ಲಿ ಬದಲಾವಣೆಯನ್ನ ತರಲಾಗಿತ್ತು ಹೀಗಾಗಿ ಹಂದಿಯ ಕಿಡ್ನಿ ಆ ರೋಗಿಯ ದೇಹದಲ್ಲಿ ಚೆನ್ನಾಗಿ ಕೆಲಸ ಮಾಡಿತ್ತು ಅನ್ನೋ ಹೇಳಿಕೆಯನ್ನ ನೀಡಿದ್ರು.

ಇದನ್ನೇ ಮಾದರಿಯಾಗಿ ತೆಗೆದುಕೊಂಡಿ ನ್ಯೂಯಾರ್ಕ್​ನ ವೈದ್ಯರು ಹಂದಿಯ ಹೃದಯವನ್ನ ಮಾನವನಿಗೆ ಅಳವಡಿಸುವ ಬಗ್ಗೆ ಚಿಂತನೆಯನ್ನ ನಡೆಸಿದ್ದರು, ಹೀಗಾಗಿ ಹಂದಿಗಳ ಜೆನೆಟಿಕಲ್​ ಲೆವೆಲ್​ ಸೇರಿದಂತೆ ಸಾಕಷ್ಟು ವಿಚಾರದಲ್ಲಿ ಬದಲಾವಣೆ ತರೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಈ ಪ್ರಕೃಯೆಯ ನಂತರ ಇಡೀ ವೈದ್ಯ ಲೋಕದವೇ ಅಚ್ಚರಿ ಪಡುವಂತಹ ಕಾರ್ಯವನ್ನ ವೈದ್ಯರು ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಈ ಮೂಲಕ ಇದೀಗ ಹಂದಿಯ ಹೃದಯದಿಂದಲೂ ಮಾನವನ ಜೀವ ಉಳಿಸಬಹುದು ಹಾಗು ಪ್ರಾಣಿಗಳ ಅಂಗಾಗವನ್ನ ಬಳಸಿಕೊಂಡು ಮಾನವನ ಪ್ರಾಣ ಉಳಿಸ ಬಹುದು ಅನ್ನೋದನ್ನ ಸಾಬೀತು ಮಾಡಿದ ಹಾಗೆ ಆಗಿದೆ.

ಇನ್ನು ಈ ಶಸ್ತ್ರಚಿಕಿತ್ಸೆಯನ್ನ ತುಂಬಾ ಸೂಕ್ಷ್ಮವಾಗಿ ನಡೆಸಲಾಗಿದ್ದು, ಮೂರು ದಿನಗಳ ನಂತರ ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯರು ಅಧಿಕೃತವಾದ ಪ್ರಕಟಣೆಯನ್ನ ಹೊರಡಿಸಿದ್ದಾರೆ. ಸದ್ಯಕ್ಕೆ ಈ ಚಿಕಿತ್ಸೆಯನ್ನ 57 ವರ್ಷ ವಯಸ್ಸಿನ ಡೇವಿಡ್ ಬೆನೆಟ್ ಎಂಬುವವರಿಗೆ ನೀಡಲಾಗಿದ್ದು, ಅವರು ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ರು. ಹೀಗಾಗಿ ಶುಕ್ರವಾರ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡನೆ ಮಾಡಲಾಗಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಾನವನ ದೇಹದಲ್ಲಿ ಪ್ರಾಣಿಗಳ ಹೃದಯವು ಚನ್ನಾಗಿಯೇ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಇದೀಗ ಶಸ್ತ್ರಚಿಕಿತ್ಸೆಗಳಿಗೆ ಬೇಕಾದ ಮಾನವ ಅಂಗಾಗಗಳ ಕೊರತೆಯಿರುವ ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸ ಬೇಕು ಹಾಗು ಪ್ರಾಣಿಗಳ ಅಂಗಗಳನ್ನು ಹೇಗೆ ಬಳಸುವುದು ಅನ್ನೊ ಬಗ್ಗೆ ಈಗ ಸಂಶೋಧನೆಗಳು ಆರಂಭವಾಗಿದ್ದು. ಈ ಅನ್ವೇಷಣೆಗೆ ಅಮೆರಿಕ​ ವೈದ್ಯರು ನಡೆಸಿರುವ ಈ ಶಸ್ತ್ರಚಿಕಿತ್ಸೆ ಹಲವರಿಗೆ ಪ್ರೇರಣೆಯಾಗಿದೆ. ಅಂತ ಕೂಡ ಹೇಳಲಾಗ್ತಾ ಇದೆ.

ಒಟ್ಟಾರೆಯಾಗಿ ಜಗತ್ತಿನ ವೈದ್ಯ ಲೋಕ ಈಗ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಮುಂದಿನ ದಿನಗಳಲ್ಲಿ ಪ್ರಾಣಿಗಳ ಅಂಗಗಳು ಕೂಡ ಮಾನವನ ಜೀವ ಉಳಿಸಲಿವೆ ಅನ್ನೊದು ಈ ಮೂಲಕ ದೃಢವಾಗಿದೆ, ಆದ್ರೆ ಈ ಬಗ್ಗೆ ಇನ್ನೂ ಕೆಲ ಸಂಶೋಧಕರು ಬೇರೆಯದ್ದೇ ಹೇಳ್ತಾ ಇದ್ದು, ಒಂದು ವೇಳೆ ಹಂದಿಗಳ ಜೆನೆಟಿಕ್​ ಲೆವೆಲ್​ ಅನ್ನ ನೀಡಿದ್ದೇ ಆದ್ರೆ ಇದು ಮುಂದಿನ ದಿನಗಳಲ್ಲಿ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀಳಲಿದೆ ಅಂತ ಅಂದಾಜಿಸಲಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಪ್ರಯೋಗದ ಬಗ್ಗೆ ಇನ್ಯಾವ ಬದಲಾವಣೆಗಳು ಆಗಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

ಲಿಖಿತ್​​ ರೈ, ಪವರ್​​ ಟಿವಿ

RELATED ARTICLES

Related Articles

TRENDING ARTICLES