Thursday, April 25, 2024

ಉತ್ತರಪ್ರದೇಶ ಚುನಾವಣಾ ಅಖಾಡದಲ್ಲಿ ಹೊಸ ತಂತ್ರಗಾರಿಕೆ

ಇದು ಜಿದ್ದಾಜಿದ್ದಿನ ಅಖಾಡ ಗೆಲ್ಲಲೇ ಬೇಕು ಅಂತ ಮೂರು ಪಕ್ಷಗಳ ಪೈಪೋಟಿ. ಮತ್ತೆ ಪ್ರತಿಷ್ಠೆ ಗಿಟ್ಟಿಸಿಕೊಳ್ಳಲು ಬಿಜೆಪಿ ಪ್ಲ್ಯಾನ್‌. ಉತ್ತರ ಪ್ರದೇಶದಲ್ಲಿ ಮುಂದಿನ ತಿಂಗಳೇ ವಿಧಾನಸಭೆ ಚುನಾವಣೆ ಇದೆ. ಇಂತಹ ಸಮಯದಲ್ಲೇ ಯೋಗಿಗೆ ಶಾಕ್‌ ಕೊಟ್ಟಿದ್ದಾರೆ ಅವರದ್ದೇ ಸಂಪುಟದ ಮಂತ್ರಿ. ಇತ್ತ, ಮೌನವಾಗಿದ್ದುಕೊಂಡೇ ಮಾಯಾವತಿ ಲೆಕ್ಕಾಚಾರ ಹಾಕ್ತಿದ್ದಾರೆ.

ಉತ್ತರ ಪ್ರದೇಶದ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಈ ಮಧ್ಯೆ ಉತ್ತರ ಪ್ರದೇಶದ ರಾಜಕೀಯದಲ್ಲಿ ದೊಡ್ಡ ಸಂಚಲನ ಉಂಟಾಗಿದ್ದು, ಯೋಗಿ ನೇತೃತ್ವದ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಉತ್ತರ ಪ್ರೇದಶದ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಂಪುಟ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಲ್ಕು ಇಲಾಖೆಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಸ್ವಾಮಿ ಪ್ರಸಾದ್, ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿರುವುದು ಬಿಜೆಪಿ ಪಾಳೆಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಟಿಕೆಟ್ ಹಂಚಿಕೆ ಕುರಿತಂತೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ಹಾಗೂ ಬಿಜೆಪಿ ಮಧ್ಯೆ ವಿವಾದ ಇತ್ತು ಎನ್ನಲಾಗುತ್ತಿದೆ. ಅಲ್ಲದೆ, ಸಮಾಜವಾದಿ ಪಾರ್ಟಿಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಸ್ವಾಮಿ ಪ್ರಸಾದ್ ಮೌರ್ಯ ಭೇಟಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವ ಸಚಿವ ಸ್ವಾಮಿ ಪ್ರಸಾದ್, ಸೈಕಲ್‌ ಹತ್ತುವ ಮೂಲಕ ಕಮಲ ಪಡೆಗೆ ಶಾಕ್‌ ಕೊಟ್ಟಿದ್ದಾರೆ.

ಇಷ್ಟೇ ಅಲ್ಲ, ಬಿಜೆಪಿ ವಿರುದ್ಧ ತೊಡೆ ತಟ್ಟಿರುವ ಮಾಜಿ ಸಿಎಂ ಅಖಿಲೇಶ್‌ ಯಾದವ್‌, ಕಮಲ ಪಡೆಯ ಇನ್ನಷ್ಟು ನಾಯಕರನ್ನು ಸೆಳೆಯಲು ಕಸರತ್ತು ನಡೆಸಿದ್ದಾರೆ.. ಸ್ವಾಮಿ ಪ್ರಸಾದ್‌ ಎಸ್‌ಪಿ ಸೇರಿಕೊಂಡ ಬೆನ್ನಲ್ಲೇ ಇನ್ನಷ್ಟು ಶಾಸಕರು ಸಮಾಜವಾದಿ ಪಾರ್ಟಿ ಸೇರಲಿದ್ದಾರೆ ಎನ್ನಲಾಗುತ್ತಿದೆ. ಅಚ್ಚರಿ ಬೆಳವಣಿಗೆ ಅಂದ್ರೆ ಎನ್‌ಸಿಪಿ ಮುಖಂಡ ಶರದ್‌ ಪವಾರ್ ಬಹಿರಂಗವಾಗಿ ಉತ್ತರಪ್ರದೇಶ ಚುನಾವಣಾ ಅಖಾಡಕ್ಕಿಳಿದಿರುವುದು. 13ಕ್ಕೂ ಹೆಚ್ಚು ಬಿಜೆಪಿ ನಾಯಕರು ಎಸ್‌ಪಿ ಸೇರಲಿದ್ದಾರೆ ಅಂತ ಹೇಳಿಕೆ ನೀಡುವ ಮೂಲಕ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಬಾಂಬ್‌ ಸಿಡಿಸಿದ್ದಾರೆ.

ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಮತ್ತು ಪಕ್ಷದ ಪ್ರಮುಖ ನಾಯಕ, ಸಂಸದ ಸತೀಶ್ ಚಂದ್ರ ಮಿಶ್ರಾ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಬಿಎಸ್ಪಿ ವರಿಷ್ಠೆ ಮಾಯಾವತಿ ಅವರು ಪಂಚರಾಜ್ಯ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದು ಸತೀಶ್ ಚಂದ್ರ ಮಿಶ್ರಾ ಹೇಳಿದ್ದಾರೆ.

ಇತ್ತ, ಬಿಜೆಪಿ ಡೋರ್‌ ಟು ಡೋರ್‌ ಜನ ಸಂಪರ್ಕ ಅಭಿಯಾನ ಆರಂಭಿಸಿದ್ದು, ಮತದಾರರ ಓಲೈಕೆ ಮಾಡ್ತಿದೆ. ಬಿಜೆಪಿ ನಾಯಕರು ಮನೆ ಬಾಗಿಲಿಗೆ ಹೋಗಿ ಹಣೆಗೆ ಬೊಟ್ಟಿಟ್ಟು, ಮನೆ ಮುಂದೆ ಪಕ್ಷದ ಲೇಬಲ್‌ ಅಂಟಿಸಿ ಬರ್ತಿದ್ದಾರೆ.

ಉತ್ತರಪ್ರದೇಶ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ಅಭಿವೃದ್ಧಿ ಮಂತ್ರ ಜಪಿಸ್ತಿರುವ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್‌ಗೆ ಶಾಕ್‌ ಕೊಡ್ತಿದ್ದಾರೆ ಅಖಿಲೇಶ್‌ ಯಾದವ್‌. ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇವುಗಳ ಪೈಕಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವುದು ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ ಕೂಡ ಪ್ರತಿಷ್ಟೆಯ ಅಖಾಡವಾಗಿದ್ದು, ಹಲವು ಕಾಂಗ್ರೆಸ್‌ ನಾಯಕರು ಬಿಜೆಪಿ ಸೇರಿದ್ದಾರೆ.

403 ಸೀಟುಗಳು ಇರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಿಂದ ಆರಂಭವಾಗುವ ಚುನಾವಣೆ, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಒಟ್ಟಿನಲ್ಲಿ ದೇಶದ ಅತಿ ದೊಡ್ಡ ವಿಧಾನಸಭೆ ಚುನಾವಣೆಗಳಲ್ಲೊಂದಾದ ಉತ್ತರ ಪ್ರದೇಶ ಈ ಬಾರಿ ಕುತೂಹಲ ಮೂಡಿಸಿದೆ. ಯಾಕಂದ್ರೆ, 2024ಕ್ಕೆ ಮೋದಿ ಮತ್ತೊಮ್ಮೆ ದೇಶದ ಚುಕ್ಕಾಣಿ ಹಿಡಿತಾರೊ ಇಲ್ವೊ ಅನ್ನೋದು ಈ ಫಲಿತಾಂಶದಿಂದ ಗೊತ್ತಾಗಲಿದೆ.

RELATED ARTICLES

Related Articles

TRENDING ARTICLES