ಚಾಮರಾಜ ನಗರ : ಐದೂವರೆ ತಿಂಗಳ ಬಳಿಕ ಮತ್ತೇ ಜಾರಿಯಾಗಿರುವ ವಾರಾಂತ್ಯ ಕರ್ಫ್ಯೂಗೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಗುಂಪುಗೂಡಿ ಜನರು ಮಾತನಾಡುವುದು, ಅನಗತ್ಯ ಓಡಾಟ ನಡೆಸುವುದು ಸಾಮಾನ್ಯವಾಗಿದೆ.
ನಗರದಲ್ಲಿ ದಿನಸಿ ಅಂಗಡಿಗಳು ಬಾಗಿಲು ಮುಚ್ಚಿಕೊಂಡಿದ್ದರೇ ಸತ್ಯಮಂಗಲಂ ರಸ್ತೆಯಲ್ಲಿನ ಬಹುತೇಕ ಅಂಗಡಿಗಳು, ಟೀ ಶಾಪ್, ಬೇಕರಿ ತೆರೆದು ರಾಜಾರೋಷವಾಗಿ ವಹಿವಾಟು ನಡೆಸುತ್ತಿರುವುದು ಕಂಡುಬಂದಿತು.
ವಾರಾಂತ್ಯ ಕರ್ಫ್ಯೂ ಹೇರುವುಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದರೂ ಮಾಸ್ಕ್ ಧರಿಸಿದೇ ಜನರು ಓಡಾಡುತ್ತಿದ್ದು ನಗರಸಭೆಯಾಗಲಿ, ಸುರಕ್ಷಾ ಪಡೆಯಾಗಲಿ ತಲೆಕೆಡೆಸಿಕೊಂಡಿಲ್ಲ. ವಾರಾಂತ್ಯ ನಿಷೇಧದ ಪಾಲನೆಯನ್ನೂ ಜಿಲ್ಲೆಯಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲದಿರುವುದು ಸ್ಪಷ್ಟವಾಯಿತು.
ಹೋಟೆಲ್ಗಳಲ್ಲಿ ಪಾರ್ಸೆಲ್ಗಷ್ಟೇ ಅವಕಾಶ ಇರುವುದರಿಂದಲೋ ಏನೋ ವೀಕೆಂಡ್ ನಲ್ಲಿ ಭರ್ಜರಿ ವ್ಯಾಪಾರ ಮಾಡುತ್ತಿದ್ದ ಮಾಂಸಹಾರಿ ಹೋಟೆಲ್ಗಳು ಸೇರಿದಂತೆ ಎಲ್ಲಾ ಬಗೆಯ ರೆಸ್ಟೊರೆಂಟ್ಗಳು ವ್ಯಾಪಾರ ಇಲ್ಲದೇ ಭಣಗುಡುತ್ತಿವೆ. ಒಟ್ಟಿನಲ್ಲಿ, ವಾರಾಂತ್ಯ ನಿರ್ಬಂಧಕ್ಕೆ ಗಡಿಜಿಲ್ಲೆ ಜನರು ಡೋಂಟ್ ಕೇರ್ ಮನೋಭಾವವನ್ನು ಪ್ರದರ್ಶಿಸಿದ್ದಾರೆ.