ಕಾರವಾರ : ಸರಕಾರಿ ಅಧಿಕಾರಿಯೋರ್ವರು ವಿಐಪಿ ಟ್ರ್ಯಾಕಿನಲ್ಲೇ ತಮ್ಮ ವಾಹನವನ್ನು ಬಿಡಬೇಕೆಂದು ಪಟ್ಟು ಹಿಡಿದು ಮುಕ್ಕಾಲು ಗಂಟೆ ಸರಕಾರೀ ವಾಹನ ನಿಲ್ಲಿಸಿಟ್ಟು ದರ್ಪ ತೋರಿದ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೆಲೇಕೆರಿಯ ರಾಷ್ಟ್ರೀಯ ಹೆದ್ದಾರಿ 66ರ ಟೋಲಗೇಟ್ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಟೋಲಗೇಟ್ನಲ್ಲಿ ಲಘು ವಾಹನ, ಭಾರೀ ವಾಹನ, ಸ್ಥಳೀಯ ವಾಹನ, ಅಂಬ್ಯುಲನ್ಸ್ ಹೀಗೆ ಬೇರೆ ಬೇರೆ ಟ್ರ್ಯಾಕಗಳನ್ನು ನಿಗದಿಪಡಿಸಲಾಗಿದೆ. ಅದರಂತೆ ವಿಐಪಿಗಳ ವಾಹನಗಳು ಬಂದಾಗ ನಿರ್ದಿಷ್ಠ ಟ್ರ್ಯಾಕ್ನಲ್ಲಿ ಸಾಗಬೇಕಾಗುತ್ತದೆ. ವಿಐಪಿ ಟ್ರ್ಯಾಕ್ನಲ್ಲಿ ಓರ್ವ ಸೆಕ್ಯೂರಿಟಿ ಗಾರ್ಡ ಇದ್ದು ಸೈರನ್ ಇರುವ ಎಸ್ಕಾರ್ಟ ವಾಹನದ ಜೊತೆ ವಿಐಪಿಗಳ ವಾಹನ ಬಂದಾಗ ಮಾತ್ರ ಈ ಗೇಟನ್ನು ಓಪನ್ ಮಾಡಲಾಗುತ್ತದೆ. ಆದರೆ ನೀರಾವರಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಯೋರ್ವರು ತಮ್ಮ ಸರಕಾರೀ ಜೀಪನ್ನು ವಿಐಪಿ ಗೇಟ್ ಮೂಲಕವೇ ಬಿಡಬೇಕೆಂದು ಪಟ್ಟು ಹಿಡಿದಿದ್ದಾರೆ.
ನಿಯಮದ ಪ್ರಕಾರ ಬಿಡುವಂತಿಲ್ಲ ಸ್ಥಳೀಯ ಮತ್ತು ಸರಕಾರೀ ವಾಹನಗಳನ್ನು ಬೇರೆ ಟ್ರ್ಯಾಕ್ನಲ್ಲಿ ಉಚಿತವಾಗಿ ಬಿಡಲಾಗುತ್ತದೆ ಎಂದು ಟೋಲ್ ಸಿಬ್ಬಂದಿಯವರು ತಿಳಿ ಹೇಳಿದರೂ ಪಟ್ಟು ಬಿಡದೆ ತಾನು ಅಲ್ಲಿಂದಲೇ ಹೋಗುವುದಾಗಿ ದರ್ಪ ತೋರಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಅಧಿಕಾರಿ ಇದೇ ರೀತಿ ವರ್ತಿಸುತ್ತಿದ್ದು ಅಲ್ಲಿನ ಸಿಸಿ ಕ್ಯಾಮರಾ ಹಾಗೂ ಪ್ರವಾಸಿಗರ ಮೊಬೈಲಗಳಲ್ಲೂ ಸೆರೆಯಾಗಿದೆ.
ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಅಧಿಕಾರಿಗಳೇ ಸಭ್ಯತೆ ಮೀರಿ ನಡೆದಾಗ ಅದಕ್ಕೆ ಕ್ರಮ ಕೈಗೊಳ್ಳಬೇಕಾದ ಅಗತ್ಯತೆ ಇದೆ.
ಉದಯ ಬರ್ಗಿ ಪವರ್ ಟಿವಿ ಕಾರವಾರ