Wednesday, January 22, 2025

ಪಂಚಭಾಷಾ ಪರಂಪರ ಸೀರೀಸ್​ನಲ್ಲಿ ಕನ್ನಡಿಗ ಇಶಾನ್

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುರನ್ನ ಮೀರಿಸೋ ಅಂತಹ ಮಿಲ್ಕಿ ಬಾಯ್ ನಮ್ಮ ಸ್ಯಾಂಡಲ್​ವುಡ್ ಅಂಗಳದಲ್ಲೂ ಇದ್ದಾರೆ. ಈತ ಈಗಾಗ್ಲೇ ಇಂಡಸ್ಟ್ರಿಗೆ ಇಂಟ್ರಡ್ಯೂಸ್ ಆಗಿದ್ರೂ, ವೆಬ್ ಸೀರೀಸ್​ವೊಂದರಿಂದ ಪ್ಯಾನ್ ಇಂಡಿಯಾ ಸೌಂಡ್ ಮಾಡ್ತಿದ್ದಾರೆ. ದಿಗ್ಗಜ ಕಲಾವಿದರ ಸಮಾಗಮದ ಆ ಸೀರೀಸ್ ಯಾವುದು..? ಆ ಮಿಲ್ಕಿ ಬಾಯ್ ಯಾರು ಅಂತೀರಾ..?

ಸದ್ಯ ಒಟಿಟಿಯಲ್ಲಿ ಸಖತ್ ಸದ್ದು ಮಾಡ್ತಿರೋ ಇಂಡಿಯನ್ ವೆಬ್ ಸೀರೀಸ್​ಗಳಲ್ಲಿ ಪರಂಪರ ಕೂಡ ಒಂದು. ಕಾರಣ ಅದ್ರ ಕಥೆ, ಚಿತ್ರಕಥೆ, ನಿರ್ದೇಶನ, ಪಾತ್ರಗಳು ಹಾಗೂ ಮೇಕಿಂಗ್. ಬಾಹುಬಲಿ ಮೇಕರ್ಸ್​ ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ನಿರ್ಮಾಣದ ಸೀರೀಸ್ ಇದಾಗಿದ್ದು ಗತ್ತು, ಗಮ್ಮತ್ತು ಸಖತ್ ಜೋರಿದೆ.
ಶರತ್ ಕುಮಾರ್, ಜಗಪತಿ ಬಾಬು, ಆಕಾಂಕ್ಷಾ ಸಿಂಗ್​ರಂತಹ ದೊಡ್ಡ ತಾರಾಗಣವಿರೋ ಈ ಪರಂಪರ ಸೀರೀಸ್, ಒಂದೇ ಕುಟುಂಬದ ಮಂದಿಯ ನಡುವೆ ಅಧಿಕಾರಕ್ಕಾಗಿ ನಡೆಯೋ ಸಮರವನ್ನ ತೋರಲಿದೆ. ನಾಯ್ಡು- ಮೋಹನ್ ರಾವ್ ಸಹೋದರರ ನಡುವಿನ ಬಾಂಧವ್ಯ, ಮುಂದೆ ಅವರ ಮಕ್ಕಳಲ್ಲಿ ಕಾಂಪಿಟೇಷನ್​ಗೆ ವಾಲುತ್ತದೆ.

ನಾಯ್ಡು ಮಗ ಸುರೇಶ್ ಪಾತ್ರದಲ್ಲಿ ಇಶಾನ್, ಮೋಹನ್ ರಾವ್ ಪುತ್ರ ಗೋಪಿ ಪಾತ್ರದಲ್ಲಿ ನವೀನ್ ಚಂದ್ರ ನಡುವಿನ ಜುಗಲ್ಬಂದಿ ಸುಮಾರು ಏಳು ಎಪಿಸೋಡ್​ಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಇಲ್ಲಿ ಪ್ರಿನ್ಸ್ ಮಹೇಶ್ ಬಾಬು ರೀತಿ ಹಾಲುಗಲ್ಲದ ಸ್ಫುರದ್ರೂಪಿ ಯುವಕನಾಗಿ ಎರಡು ಶೇಡ್​ಗಳಲ್ಲಿ ಇಶಾನ್ ಮಿಂಚು ಹರಿಸಿದ್ದಾರೆ. ಇವರ ಲುಕ್ಸ್ ಸ್ಯಾಂಡಲ್​ವುಡ್ ಮಿಲ್ಕಿಬಾಯ್ ಅನ್ನೋ ಬಿರುದಿಗೆ ಹೇಳಿ ಮಾಡಿಸಿದಂತಿದೆ.

ಇಶಾನ್ ಅಪ್ಪಟ ಕನ್ನಡ ಪ್ರತಿಭೆ. ಈ ಹಿಂದೆ ರೋಗ್ ಚಿತ್ರದ ಮೂಲಕ ಕನ್ನಡ ಹಾಗೂ ತೆಲುಗಿಗೆ ಏಕಕಾಲದಲ್ಲಿ ಇಂಟ್ರಡ್ಯೂಸ್ ಆಗಿದ್ರು. ತಕ್ಕಮಟ್ಟಿಗೆ ಸಿನಿಮಾ ಸದ್ದು ಮಾಡಿತಾದ್ರೂ, ನಿರೀಕ್ಷಿತ ಗೆಲುವಿಗಾಗಿ ಕಾಯ್ತಿದ್ರು ಇಶಾನ್. ಸಿಆರ್ ಮನೋಹರ್​ ಕುಟುಂಬದ ಕುಡಿ ಇಶಾನ್​ಗೆ ಸದ್ಯ ನಮ್ಮ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಌಕ್ಷನ್ ಕಟ್ ಹೇಳಿದ್ದಾರೆ. ರೇಮೊ ಚಿತ್ರ ರಿಲೀಸ್​ಗೂ ಮೊದಲೇ ವೆಬ್ ಸೀರೀಸ್​ನಿಂದ ಆ ಸಕ್ಸಸ್​ನ ಪಡೆದೇಬಿಟ್ರು ಈ ಮಿಲ್ಕಿಬಾಯ್.

ಅಂದಹಾಗೆ ಇಶಾನ್ ಜೊತೆ ಬಣ್ಣ ಹಚ್ಚಿರೋ ಮತ್ತೊಬ್ಬ ಪಾತ್ರದಾರಿ ನವೀನ್ ಚಂದ್ರ ಕೂಡ ನಮ್ಮ ಕನ್ನಡಿಗ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹೌದು.. ತೆಲುಗು ಸಿನಿಮಾಗಳಲ್ಲೇ ಶೈನ್ ಆಗಿ, ಕಮಾಲ್ ಮಾಡ್ತಿರೋ ಗೋಪಿ ಪಾತ್ರ ನಿರ್ವಹಿಸಿರೋ ನವೀನ್ ಚಂದ್ರ ಬಳ್ಳಾರಿ ಮೂಲದ ದೇಸಿ ಪ್ರತಿಭೆ. ಹೀಗೆ ಇಬ್ಬರು ಕನ್ನಡಿಗರು ಲೀಡ್​ನಲ್ಲಿ ನಟಿಸಿರೋ ಸೀರೀಸ್ ತೆಲುಗು, ಕನ್ನಡದ ಜೊತೆ ಪಂಚಭಾಷೆಯಲ್ಲಿ ಹಿಟ್ ಆಗಿರೋದು ಖುಷಿಯ ವಿಚಾರ.

ಸದ್ಯದಲ್ಲೇ ಸೀಸನ್ 2 ಕೂಡ ರಿಲೀಸ್ ಆಗಲಿದ್ದು, ಅಧಿಕಾರದ ಚುಕ್ಕಾಣಿ ಗೋಪಿ ಪಾಲಾಗುತ್ತಾ ಅಥ್ವಾ ಸುರೇಶ್ ಉಳಿಸಿಕೊಳ್ತಾರಾ ಅನ್ನೋದು ನಿರೀಕ್ಷಿಸಬೇಕಿದೆ. ಒಟ್ಟಾರೆ ಒಟಿಟಿ ಪ್ಲಾಟ್​ಫಾರ್ಮ್​ ಈ ರೀತಿಯ ಅಪರೂಪದ ಪ್ರತಿಭೆಗಳ ಟ್ಯಾಲೆಂಟ್​ಗೆ ಒಂದೊಳ್ಳೆ ವೇದಿಕೆ ಆಗಿರೋದು ಉತ್ತಮ ಬೆಳವಣಿಗೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES