Thursday, April 25, 2024

ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಜನವರಿ 3 ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ. ಅವರು 1831 ರಲ್ಲಿ ಈ ದಿನ ಮಹಾರಾಷ್ಟ್ರದ ಸತಾರಾದ ನೈಗಾಂವ್‌ನಲ್ಲಿ ರೈತ ಕುಟುಂಬದಲ್ಲಿ ಜನಿಸಿದರು. ಮಹಿಳೆಯರ ಸ್ಥಿತಿಯನ್ನು ಸುಧಾರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿ ಭಾರತದಲ್ಲಿ ಮಹಿಳಾ ಶಿಕ್ಷಣದ ನಾಯಕರಾದರು. ಸಾವಿತ್ರಿಬಾಯಿ ಫುಲೆ ಅವರನ್ನು ಭಾರತದ ಮೊದಲ ಆಧುನಿಕ ಸ್ತ್ರೀವಾದಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 1840 ರಲ್ಲಿ, ಒಂಬತ್ತನೆಯ ವಯಸ್ಸಿನಲ್ಲಿ, ಸಾವಿತ್ರಿಬಾಯಿ 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು. ಬಾಲ್ಯವಿವಾಹ, ಸತಿಯಂತಹ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದರು.

ಶಿಕ್ಷಣ ಕ್ಷೇತ್ರದ ಕ್ರಾಂತಿ :

19ನೇ ಶತಮಾನದಲ್ಲಿ ತಮ್ಮ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿಟ್ಟು ಅಸ್ಪೃಶ್ಯರು, ದಮನಿತರು, ಶೋಷಿತರು ಹಾಗೂ ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು. ಸಾವಿತ್ರಿಬಾಯಿ ಫುಲೆ ಅವರು ಇಡುತ್ತಿದ್ದ ಪ್ರತಿ ಹೆಜ್ಜೆಯ ಹಿಂದೆ ಅವರ ಪತಿ ಜ್ಯೋತಿ ಬಾ ಫುಲೆ ಅವರ ಸಹಕಾರವಿರುತ್ತಿತ್ತು. ಅವರಿಬ್ಬರ ದಾಂಪತ್ಯ ಜೀವನವೇ ಒಂದು ಆದರ್ಶ ಬದುಕು. ಅದೊಮ್ಮೆ ತನ್ನ ಸ್ನೇಹಿತನ ಮದುವೆಯಲ್ಲಿ ಅವಮಾನಿತರಾಗಿ ಹೊರಬಂದ ಜ್ಯೋತಿಬಾ ಫುಲೆ, ಶಿಕ್ಷಣದಿಂದ ವಂಚಿತರಾದ ಸಮುದಾಯಕ್ಕಾಗಿ ಶಾಲೆಯನ್ನು ತೆರೆಯುವ ಪಣತೊಟ್ಟು 1848ರಲ್ಲಿ ಮೊದಲ ಬಾರಿಗೆ ಪುಣೆಯಲ್ಲಿ ಅಸ್ಪೃಶ್ಯರು, ಹಿಂದುಳಿದವರು ಹಾಗೂ ಮಹಿಳೆಯರಿಗಾಗಿಯೇ ಪ್ರತ್ಯೇಕ ಶಾಲೆಗಳನ್ನು ತೆರೆದರು. ಆಗ ಕೆಳವರ್ಗದವರ ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬಾರದಿದ್ದಾಗ ಜ್ಯೋತಿಬಾ ಫುಲೆ ಅವರು ತಮ್ಮ ಮಡದಿ ಸಾವಿತ್ರಿಬಾಯಿ ಫುಲೆ ಅವರನ್ನೇ ಶಿಕ್ಷಕಿಯನ್ನಾಗಿ ನೇಮಿಸಿದರು.ಮಹಿಳಾ ಶಿಕ್ಷಣಕ್ಕೆ ಒತ್ತು ನೀಡಿ, ಹೆಣ್ಣು ಮಕ್ಕಳಿಗಾಗಿ 18 ಶಾಲೆಗಳನ್ನು ತೆರೆದರು.

ಜಾತಿ ವ್ಯವಸ್ಥೆಯ ವಿರುದ್ಧವೂ ಹೋರಾಡಿದರು :

ಸಾವಿತ್ರಿಬಾಯಿ ಅವರು ಮಹಿಳೆಯರ ಹಕ್ಕುಗಳಿಗಾಗಿ ಶ್ರಮಿಸಿದ್ದಲ್ಲದೆ, ಸಮಾಜದಲ್ಲಿ ಚಾಲ್ತಿಯಲ್ಲಿರುವ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಜಾತಿ ಪದ್ಧತಿಯನ್ನು ತೊಡೆದುಹಾಕುವ ಅವರ ಉತ್ಸಾಹದ ಭಾಗವಾಗಿ, ಅವರು ಅಸ್ಪೃಶ್ಯರಿಗಾಗಿ ತಮ್ಮ ಮನೆಯಲ್ಲಿ ಬಾವಿಯನ್ನು ನಿರ್ಮಿಸಿದರು. ಸಾವಿತ್ರಿಬಾಯಿ ಸಮಾಜ ಸುಧಾರಕಿ ಮಾತ್ರವಲ್ಲ, ತತ್ವಜ್ಞಾನಿ ಮತ್ತು ಕವಿಯೂ ಆಗಿದ್ದರು. ಅವರ ಕವಿತೆಗಳು ಹೆಚ್ಚಾಗಿ ಪ್ರಕೃತಿ, ಶಿಕ್ಷಣ ಮತ್ತು ಜಾತಿ ಪದ್ಧತಿಯ ನಿರ್ಮೂಲನೆಯನ್ನು ಕೇಂದ್ರೀಕರಿಸಿದವು. ವಿಧವೆಯರು, ಅತ್ಯಾಚಾರ ಸಂತ್ರಸ್ತರಿಗಾಗಿ ಕ್ರಮಗಳನ್ನು ತೆಗೆದುಕೊಂಡರು

ತಾಯ್ತನದಿಂದ ವಂಚಿತರಾಗಿದ್ದ ಸಾವಿತ್ರಿಬಾಯಿ ಅವರು ಅಪ್ಪ-ಅಮ್ಮಂದಿರನ್ನು ಕಳೆದುಕೊಂಡು ಬೀದಿಯಲ್ಲಿದ್ದ ಮಕ್ಕಳಿಗಾಗಿ ಅನಾಥಾಶ್ರಮಗಳನ್ನು ಸ್ಥಾಪಿಸುವ ಮೂಲಕ ಆ ನಿರ್ಗತಿಕ ಮಕ್ಕಳಿಗೆ ತಾವೇ ತಾಯಿ-ತಂದೆಯಾದರು. ಇಷ್ಟೇ ಅಲ್ಲದೆ ಸಾವಿತ್ರಿಬಾಯಿ ಅವರು ಮಹಿಳೆಯರ ಅನೇಕ ಸಮಸ್ಯೆಗಳ ನಿವಾರಣೆಗೆ ಮುಂದಾದರು. ಅದಕ್ಕಾಗಿ ಅವರು ಸಾಕಷ್ಟುಹೋರಾಟಗಳನ್ನು ಮಾಡಬೇಕಾಯಿತು.

ವಿಧವೆಯರ ತಲೆ ಬೋಳಿಸುವ ಅನಿಷ್ಠ ಪದ್ಧತಿಯನ್ನು ಸಾವಿತ್ರಿಭಾಯಿ ಅವರು ಪ್ರಬಲವಾಗಿ ವಿರೋಧಿಸಿದರು. ಯಾರ ವಿರೋಧವನ್ನೂ ಲೆಕ್ಕಿಸದೆ ವಿಧವೆಯರ ಪುನರ್ವಿವಾಹ ಮಾಡಿಸುವ ಮೂಲಕ ವಿಧವೆಯರ ಬಾಳು ಬೆಳಕಾಗಿಸಿದರು. ಅಂದಿನ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ವಿಧವೆಯರ ಮರುವಿವಾಹ ಮಾಡಿಸುವಂತ ಒಂದು ಕ್ರಾಂತಿಕಾರಿ ನಿಲುವು ತಳೆದಿದ್ದು ಬಹುದೊಡ್ಡ ಸಾಧನೆ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಗರ್ಭಿಣಿ, ಅತ್ಯಾಚಾರ ಸಂತ್ರಸ್ತರ ಕರುಣಾಜನಕ ಸ್ಥಿತಿಯನ್ನು ನೋಡಿದ ಅವರು ತಮ್ಮ ಪತಿಯೊಂದಿಗೆ ‘ಬಾಲ್ಹತ್ಯ ಪ್ರಬಂಧ ಗೃಹ’ ಎಂಬ ಆರೈಕೆ ಕೇಂದ್ರವನ್ನು ತೆರೆದರು.

ಅಂತರ್ಜಾತಿ ವಿವಾಹದ ಪ್ರಚಾರ :

ಮಕ್ಕಳು ಓದುವುದನ್ನು ಮತ್ತು ಶಾಲೆ ಬಿಡುವುದನ್ನು ತಡೆಯುವ ವಿಶಿಷ್ಟ ಪ್ರಯತ್ನ ಮಾಡಿದರು. ಶಾಲೆಗೆ ಹೋಗಲು ಮಕ್ಕಳಿಗೆ ಸ್ಟೈಫಂಡ್ ನೀಡುತ್ತಿದ್ದರು. ದೇಶದಲ್ಲಿ ಜಾತಿ ವ್ಯವಸ್ಥೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ಪತಿಯೊಂದಿಗೆ ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು, ಇದು ಪುರೋಹಿತರು ಮತ್ತು ವರದಕ್ಷಿಣೆ ಇಲ್ಲದೆ ವಿವಾಹಗಳನ್ನು ನಡೆಸಿತು. 1897 ರಲ್ಲಿ, ಪುಣೆಯಲ್ಲಿ ಪ್ಲೇಗ್ ಇತ್ತು ಈ ಸಾಂಕ್ರಾಮಿಕ ರೋಗದಿಂದಾಗಿ, ಸಾವಿತ್ರಿಬಾಯಿ ಫುಲೆ ಅವರು ತಮ್ಮ 66 ನೇ ವಯಸ್ಸಿನಲ್ಲಿ ಪುಣೆಯಲ್ಲಿ 10 ಮಾರ್ಚ್ 1897 ರಂದು ನಿಧನರಾದರು.

ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿ ಅದರಲ್ಲಿ ಗೆದ್ದ ಸಾವಿತ್ರಿಬಾಯಿ ಫುಲೆ ಅವರ ಎಲ್ಲಾ ಸಾಧನೆಗಳನ್ನು ಗುರುತಿಸಿದ ಅಂದಿನ ಬ್ರಿಟಿಷ್‌ ಸರ್ಕಾರ ಅವರನ್ನು ‘ಭಾರತದ ಮೊದಲ ಮಹಿಳಾ ಶಿಕ್ಷಕಿ’ ಎಂದು ಕರೆದು ಗೌರವಿಸಿತು. ಇಂದು ಅಪ್ರತಿಮ ಸಾಧಕಿಯ ಜನ್ಮದಿನಾಚರಣೆ. ಈ ಸಂದರ್ಭದಲ್ಲಿ ಅವರ ಹೋರಾಟ, ಸಾಧನೆಗಳನ್ನು ಹೆಮ್ಮೆಯಿಂದ ನೆನೆದು, ಭಕ್ತಿಯಿಂದ ಗೌರವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ.

ಲೀನಾಶ್ರೀ, ಪವರ್​ ಟಿವಿ

RELATED ARTICLES

Related Articles

TRENDING ARTICLES