ನವದೆಹಲಿ: ಗಾಲ್ವಾನ್ನಲ್ಲಿ ಚೀನಾದ ಬಾವುಟ ಕಂಡು ಬಂದಿರುವ ವಿಚಾರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನ ಮುರಿಯುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ. ಚೀನಾದೊಂದಿಗಿನ ಬಿಕ್ಕಟ್ಟಿನ ವಿಚಾರವನ್ನು ಕೇಂದ್ರ ಸರ್ಕಾರ ನಿರ್ವಹಣೆ ಮಾಡುತ್ತಿರುವ ರೀತಿಯ ವಿರುದ್ಧವಾಗಿ ವಿರೋಧ ಪಕ್ಷಗಳು ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ನಮ್ಮ ತ್ರಿವರ್ಣ ಧ್ವಜವೇ ಗಾಲ್ವಾನ್ನಲ್ಲಿ ಅಂದ. ಚೀನಾಕ್ಕೆ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಬೇಕು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವನ್ನು ಮುರಿಯಿರಿ,” ಎಂದು ತಿಳಿಸಿದ್ದಾರೆ.
ಚೀನಾವು ಪ್ರಚಾರ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಈ ವಿಡಿಯೋದಲ್ಲಿ 2022ರ ಹೊಸ ವರ್ಷದ ಮೊದಲ ದಿನದಂದು ಚೀನಾವು ಗಾಲ್ವಾನ್ನಲ್ಲಿ ತನ್ನ ಬಾವುಟವನ್ನು ಹಾರಿಸುವ ದೃಶ್ಯವು ಕಂಡು ಬಂದಿದೆ. ಚೀನಾವು ಗಡಿ ಪ್ರದೇಶದಲ್ಲಿರುವ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಿರುವ ವಿಚಾರವು ಇತ್ತೀಚೆಗೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಚೀನಾವು ಗಾಲ್ವಾನ್ನಲ್ಲಿ ತನ್ನ ಬಾವುಟವನ್ನು ಹಾರಿಸಿದೆ.
ಚೀನಾವು ಅಕ್ಟೋಬರ್ನಲ್ಲಿ ವಿವಾದಾತ್ಮಕ ಗಡಿ ಭೂಮಿ ಕಾನೂನನ್ನು ಪರಿಚಯ ಮಾಡಿದ್ದು ಇದು ಜನವರಿ 1, 2022 ಜಾರಿಗೆ ಬಂದಿದೆ. ಚೀನಾ ಹಾಗೂ ನೆರೆ ರಾಷ್ಟ್ರಗಳ ನಡುವಿನಲ್ಲಿ ವಿವಾದವು ಹೆಚ್ಚಳವಾದ ಸಂದರ್ಭದಲ್ಲಿ ಚೀನಾವು ಈ ವಿವಾದಾತ್ಮಕ ಕಾನೂನನ್ನು ಜಾರಿ ಮಾಡಿದೆ. ಹಲವಾರು ದಶಕಗಳಿಂದ ಚೀನಾ ಹಾಗೂ ಭಾರತ ನಡುವೆ ಗಡಿ ಸಂಘರ್ಷವಿದ್ದು, ಇದು 2020ರ ಮೇ ತಿಂಗಳಿನಿಂದ ಅಧಿಕವಾಗಿದೆ.