ತುಮಕೂರು: ಮತಾಂತರ ನಿಷೇಧ ಕಾಯ್ದೆ ಸಂಬಂಧಿಸಿದಂತೆ ನಾನು ಯಾವುದೇ ಕರಡು ತಯಾರಿಸಿಲ್ಲ ಎಂದು ಮಾಜಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಗುರುವಾರ ಹೇಳಿದರು.
ಮತಾಂತರ ನಿಷೇಧ ಕಾಯ್ದೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿಂದು ಪವರ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾವುದಕ್ಕೂ ಸಹಿ ಹಾಕಿಲ್ಲ. ಮತಾಂತರ ನಿಷೇಧ ಕುರಿತಂತೆ ಕೆಲವು ಪ್ರಸ್ತಾವನೆ ಬಂದಿದ್ದು ನಿಜ. ಆ ಪ್ರಸ್ತಾವನೆಯಲ್ಲಿ ಏನಿತ್ತು ಎಂದು ನನಗೆ ಈಗ ನೆನಪಿಲ್ಲ ಎಂದರು.
ಇನ್ನು ಈಗಾಗಲೇ ಮೂರುವರ್ಷ ಕಳೆದಿದೆ. ಪ್ರಸ್ತಾವನೆ ಬಂದರೂ ಅದು ಸಚಿವ ಸಂಪುಟ ಮುಂದೆ ಬಂದಿಲ್ಲ. ಸಚಿವ ಸಂಪುಟದಲ್ಲಿ ಅದು ಅನುಮೋದನೆ ಪಡೆದರೆ ಮಾತ್ರ ಅದಕ್ಕೆ ಬೆಲೆ. ಸಚಿವ ಸಂಪುಟದ ಅನುಮೋದನೆ ಆಗದೇ ಇದ್ದಾಗ ಸರ್ಕಾರದ ಅದಕ್ಕೆ ಬಾಗಿ ಅಲ್ಲ ಎಂದರ್ಥ. ಸಚಿವ ಸಂಪುಟಕ್ಕೆ ಬಂದಿಲ್ಲ, ಚರ್ಚೆ ಆಗಿಲ್ಲ ಅಂದಾಗ ಇದು ಕೇವಲ ಇಲಾಖೆಗಳ ನಡುವೆ ಓಡಾಡುತಿದ್ದ ಪೇಪರಿನ ತುಂಡು, ಅದಕ್ಕೆ ಇಷ್ಟೊಂದು ವಿವಾದ ಮಾಡೋದರಲ್ಲಿ ಅರ್ಥ ಇಲ್ಲ. ರಾಜಕೀಯವಾಗಿ ಇದರ ಚರ್ಚೆ ಆಗಿಲ್ಲ. 2016ರ ಯಾವ ಬೆಳವಣಿಗೆಯೂ ನನಗೆ ನೆನಪಿಲ್ಲ ಎಂದು ಟಿ.ಬಿ ಜಯಚಂದ್ರ ಅವರು ಸ್ಪಷ್ಟನೆ ನೀಡಿದ್ದಾರೆ.