Thursday, December 26, 2024

ಮತಾಂತರ ನಿಷೇಧ ಕಾಯ್ದೆ ಮಂಡನೆ ಫಿಕ್ಸ್

ಬೆಳಗಾವಿ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ವಿಧೆಯಕ ಮಂಡನೆಗೆ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

ತೀವ್ರ ವಿರೋಧಕ್ಕೆ ಕಾರಣವಾಗಿ ಮತಾಂತರ ನಿಷೇಧ ಕಾಯ್ದೆ ಮಂಡಿಸಲು ಸರ್ಕಾರ ತುದಿಗಾಲಲ್ಲಿ ನಿಂತಿದೆ. ಸದ್ಯ ಇದೇ ಅಧಿವೇಶನದ ವೇಳೆಯೇ ಮಂಡಿಸಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ. ಮತಾಂತರ ನಿಷೇಧ ಕರಡು ಕಾಯ್ದೆ, ಗ್ರಾಮ ಪಂಚಾಯ್ತಿಗಳಿಗೆ ಇನ್ನೂ ಹೆಚ್ಚಿನ ಅಧಿಕಾರ ನೀಡುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳನ್ನು ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಬೆಳಗಾವಿಯ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡಿಸಿ ಜಾರಿಗೊಳಿಸಲು ಸಭೆ ತೀರ್ಮಾನ ಕೈಗೊಂಡಿದೆ. ಆದ್ರೆ, ಉಭಯ ಸದನಗಳಲ್ಲಿ ಕಾಯ್ದೆ ಮಂಡಿಸಿ ಅನುಮೋದನೆ ಪಡೆಯಬೇಕಿದೆ.

ಮೇಲ್ಮನೆಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದೆ. ಒಂದೆರಡು ದಿನಗಳಲ್ಲಿ ಕಾಯ್ದೆ ಮಂಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಪ್ರತಿಭಟನೆಗಳ ನಡುವೆ ವಿಧೇಯಕ ಕುರಿತ ಚರ್ಚೆಗೂ ಅನುವು ಮಾಡಿಕೊಡಬೇಕಿದೆ. ಮತಾಂತರ ನಿಷೇಧ ಕರಡು ಕಾಯ್ದೆಗೆ ಈಗಾಗಲೇ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ.

ಬಲವಂತ ಮತಾಂತರಕ್ಕೆ 3 ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ

ಮತಾಂತರಗೊಳ್ಳುವ ವ್ಯಕ್ತಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಅನುಮತಿ ಪಡೆಯಬೇಕು

ಪ್ರಸ್ತಾವಿತ ಮಸೂದೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು, ಬುದ್ಧಿಮಾಂದ್ಯರು, ಅಪ್ರಾಪ್ತರು ಮತ್ತು ಹೆಂಗಸರನ್ನು ಬಲವಂತವಾಗಿ ಮತಾಂತರ ಮಾಡಿದರೆ ಕನಿಷ್ಠ ಮೂರು ವರ್ಷದಿಂದ ಹತ್ತು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ರೂ.50 ಸಾವಿರ ದಂಡ ವಿಧಿಸಲು ಪ್ರಸ್ತಾವನೆ ಮಾಡಲಾಗಿದೆ.

ಮತಾಂತರಕ್ಕೂ ಎರಡು ತಿಂಗಳು ಮುನ್ನ ಮತಾಂತರಗೊಳ್ಳುವ ವ್ಯಕ್ತಿಯು ಈ ಕುರಿತು ನೋಟಿಸ್ ಅನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನೀಡಬೇಕಾಗುತ್ತದೆ. ಕಾಂಗ್ರೆಸ್‌ ಮತ್ತೆ ಎಚ್ಚರಿಕೆ ನೀಡಿದ್ದು, ಒಂದು ವೇಳೆ ಮತಾಂತರ ನಿಷೇಧ ಕಾಯ್ದೆ ಮಂಡನೆಗೆ ಮುಂದಾದ್ರೆ ಅದನ್ನು ನಾವು ತಡೆಯುತ್ತೇವೆ ಅಂತ ಹೇಳಿದೆ.

ಪ್ರಸ್ತುತ ಇರುವ ಕಾನೂನೇ ಪ್ರಬಲವಾಗಿದ್ದು, ಬಲವಂತದ ಮತಾಂತರಕ್ಕೆ ಅವಕಾಶವೇ ಇಲ್ಲ. ಹಾಗಾಗಿ ವಿವಿಧ ಸಮಾಜಗಳ ಮುಖಂಡರೊಂದಿಗೆ ಚರ್ಚಿಸಿ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ, ಸಾಧಕ-ಭಾದಕಗಳನ್ನು ಪರಾಮರ್ಶಿಸಿದ ನಂತರವೇ ಉದ್ದೇಶಿತ ಮತಾಂತರ ನಿಷೇಧ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಬೇಕೆಂದು ಕ್ರೈಸ್ತ ಸಮುದಾಯ ಆಗ್ರಹಿಸಿದೆ. ಆದ್ರೆ, ತೀವ್ರ ವಿರೋಧದ ನಡುವೆ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ಬ್ಯೂರೋ ರಿಪೋರ್ಟ್, ಪವರ್‌ ಟಿವಿ

RELATED ARTICLES

Related Articles

TRENDING ARTICLES