ಕಾರವಾರ : ಪಂಚಮಸಾಲಿ ಲಿಂಗಾಯತರ 2A ಮೀಸಲಾತಿ ಹೋರಾಟ ವಿಚಾರವಾಗಿ ರಾಜ್ಯದ 26 ಜಿಲ್ಲೆಗಳಿಂದ ವರದಿ ನೀಡಲು ತಿಳಿಸಿದ್ದಾಗಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಈ ಕುರಿತು ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು ಪಂಚಮಸಾಲಿ ಸಮುದಾಯ ರಾಜ್ಯದಲ್ಲಿ ದೊಡ್ಡ ಸಮುದಾಯವಾಗಿದ್ದು, ಬಸವಜಯ ಮೃತ್ಯುಂಜಯ ಶ್ರೀಗಳು ಪಾದಯಾತ್ರೆ ಮಾಡುತ್ತಿದ್ದಾರೆ. ಮೀಸಲಾತಿ ನೀಡುವಲ್ಲಿ ಕಾನೂನಾತ್ಮಕ, ಸಾಂವಿಧಾನಿಕವಾದ ಕೆಲ ತೊಡಕುಗಳಿವೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿದ್ದು, ಸ್ವಾಮೀಜಿಗಳು ಪರ ವಿರೋಧ ವ್ಯಕ್ತವಾಗಿದ್ದರಿಂದ ಸಾಧಕ ಬಾಧಕ ನೋಡಿಕೊಂಡು ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
ಕುರುಬ ಸಮುದಾಯದವರು ತಮ್ಮನ್ನ ಎಸ್ಟಿಗೆ ಸೇರಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಎಸ್ಸಿಎಸ್ಟಿ ಸಂಬಂಧ ಕುಲಶಾಸ್ತ್ರೀಯ ಅಧ್ಯಯನ ಮುಗಿದಿದ್ದು, ಮೀಸಲಾತಿ ಹೆಚ್ಚು ಮಾಡಬೇಕೆಂಬ ಒತ್ತಾಯ ಇದೆ. ಹೀಗಾಗಿ ಈ ಬಗ್ಗೆ ಪರಿಶೀಲಿಸಿ ಸರ್ಕಾರ ಮುಂದೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು. ಇನ್ನು ಬಿಪಿಎಲ್ ಕಾರ್ಡ್ ರದ್ದತಿ ಹೇಳಿಕೆಗೆ ಸಚಿವ ಉಮೇಶ ಕತ್ತಿಯವರೇ ಸ್ಪಷ್ಟನೆ ನೀಡಿದ್ದಾರೆ. ಬಿಪಿಎಲ್ ಕಾರ್ಡ್ ವ್ಯವಸ್ಥೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿದ್ದು, ಜನರು ಯಾರದೂ ಹೇಳಿಕೆಗಳಿಂದ ಆತಂಕಕ್ಕೆ ಒಳಗಾಗಬಾರದು ಅಂತಾ ಸಚಿವರು ಮನವಿ ಮಾಡಿದ್ದಾರೆ.
ಉದಯ ಬರ್ಗಿ ಕಾರವಾರ