ಗದಗ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಮೊದಲ ಬಾರಿಗೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರನ ಶ್ರೀದಿಂಗಾಲೇಶ್ವರ ಮಠಕ್ಕೆ ಭೇಟಿ ನೀಡಿದರು. ಮಠಕ್ಕೆ ಆಗಮಿಸಿದ ಡಿಕೆಶಿ ಅವರನ್ನು ಆರತಿ ಬೆಳಗಿ ಕಲಶದೊಂದಿಗೆ ಮಠದ ಕಿರಿಯ ಶ್ರೀಗಳು ಸ್ವಾಗತಿಸಿದರು. ಅಭಿಮಾನಿಗಳು ಜಯ ಘೋಷ ಕೂಗಿದರು. ಈ ವೇಳೆ ನೂಕು-ನುಗ್ಗಲು ಉಂಟಾಯಿತು. ಇದರಿಂದ ಕೋಪಗೊಂಡ ಡಿಕೆಶಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗರಕ್ಷಕನಿಗೆ ತರಾಟೆ ತೆಗೆದುಕೊಂಡರು. ನಂತರ ಶ್ರೀಗಳ ಗದ್ದುಗೆ ಆಶೀರ್ವಾದ ಪಡೆದರು.
ಸುಮಾರು ಅರ್ಧ ಗಂಟೆಕಾಲ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಡಿಕೆಶಿ ಗುಪ್ತಸಭೆ ನಡೆಸಿದರು. ಈ ಇಬ್ಬರ ಭೇಟಿ ಮತ್ತು ಗುಪ್ತ ಮಾತುಕತೆ ತೀವ್ರ ಕುತೂಹಲ ಮೂಡಿಸಿತ್ತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಮಠಕ್ಕೆ ಭೇಟಿ ಕೊಟ್ಟಿರುವ ಮೂಲ ಉದ್ದೇಶ ತಿಳಿಸದೇ ಹಾರಿಕೆ ಉತ್ತರ ನೀಡಿದ್ರು. ಶ್ರೀಗಳು ವಚನಗಳ ಮೂಲಕ ಅಪಾರ ಕ್ರಾಂತಿ ಮಾಡಿದ್ದಾರೆ. ಧನ್ಯತಾ ವ್ಯಕ್ತಿ ಭೇಟಿ ಮಾಡಬೇಕೆಂದು ಬಹಳ ದಿನ ಕಾಯುತ್ತಿದ್ದೆ. ಎಲ್ಲಿ ಶಕ್ತಿ ಇರುತ್ತೋ ಅಲ್ಲಿಗೆ ಜನ ಬರ್ತಾರೆ, ಹಾಗೆ ನಾನು ಅವರ ದರ್ಶನ ಪಡೆಯಲು ಬಂದಿದೆನಿ. ಇನ್ನು ವೀರಶೈವ ಲಿಂಗಾಯತರ ಬಗ್ಗೆ ಚರ್ಚೆ ನಡೆಸಿದ್ರಾ ಎಂಬ ಪ್ರಶ್ನೆಗೆ, ದಿಂಗಾಲೇಶ್ವರ ಶ್ರೀಗಳಿಗೆ ರಾಜಕಾರಣ ಮಾಡುವ ಇಚ್ಛೆ ಇಲ್ಲ. ಅವರು ಸಮಾಜ ಹಾಗೂ ಧರ್ಮ ಕಾಪಾಡ್ತಾ ಬಂದಿದ್ದಾರೆ ಎಂದರು.