ಬಳ್ಳಾರಿ : ಅಕ್ರಮ ಗಣಿಗಾರಿಕೆ ಜೈಲು ಸೇರಿ ಜಾಮೀನು ಮೇಲೆ ಹೊರಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ ಬಂದೊದಗಿದೆ. ಬಳ್ಳಾರಿ ಸಂಡೂರಿನ ತಮಟಿ ಮತ್ತು ಆಂಧ್ರದ ಓಬಳಾಪುರಂ ಭಾಗದ ಗಡಿಗುರುತು ನಾಶ ಮಾಡಿದ ಆರೋಪ ಜನಾರ್ದನ ರೆಡ್ಡಿ ವಿರುದ್ಧ ಕೇಳಿಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಕಾರ್ಯಾಲಯ ಮಹತ್ವದ ಸೂಚನೆ ಹೊರಡಿಸಿದೆ. ಎರಡು ತಿಂಗಳ ಒಳಗೆ ಗಡಿಪತ್ತೆ ಜಾಗದಲ್ಲಿ ಬಾರ್ಡರ್ ಫಿಕ್ಸ್ ಮಾಡಿ ವರದಿ ಸಲ್ಲಿಸುವಂತೆ ಸರ್ವೇ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಬಳ್ಳಾರಿಯ ಉದ್ಯಮಿ ಟಪಾಲ್ ಗಣೇಶ್ ಮೇ ತಿಂಗಳಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದರು. ಗಡಿಗುರುತು ಕಾರ್ಯ ವಿಳಂಬದ ಬಗ್ಗೆ PMO(ಪ್ರೈಮ್ ಮಿನಿಸ್ಟರ್ ಆಫೀಸ್)ಗೆ ಗಮನ ಸೆಳೆದಿದ್ದರು. ಟಪಾಲ್ ಗಣೇಶ್ ದೂರಿಗೆ ಸ್ಪಂದಿಸಿರುವ PMO ನಿನ್ನೆ ವಿಡಿಯೋ ಕಾನ್ಪರೆನ್ಸ್ ನಲ್ಲಿ ಬಳ್ಳಾರಿ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆಂಧ್ರದ ಸಹಭಾಗಿತ್ವದಲ್ಲಿ ಗಡಿಗುರುತು ಮಾಡಿ ಬಾರ್ಡರ್ ಫಿಕ್ಸ್ ಮಾಡಬೇಕು ಅದರ ವರದಿಯನ್ನು ಎರಡು ತಿಂಗಳ ಗಡುವಿನಲ್ಲಿ ನೀಡಬೇಕು ಅಂತ ಸೂಚಿಸಿದೆ.
2006 ರಲ್ಲಿ ಗಣಿಗಾರಿಕೆ ಶುರು ಮಾಡಿದ್ದ ರೆಡ್ಡಿ ಮೇಲೆ ಗಡಿಗುರುತು ನಾಶಮಾಡಿದ ಗುರುತಿನ ಆರೋಪವಿದೆ. ಇದೀಗ ಪ್ರಧಾನಿ ಕಾರ್ಯಾಲಯವೇ ಸೂಚಿಸಿದ್ದು, ಒಂದೊಮ್ಮೆ ಗಡಿಗುರುತು ನಾಶ ಸಂಬಂಧ ಆರೋಪ ರುಜುವಾದರೆ ಜನಾರ್ದನ ರೆಡ್ಡಿಗೆ ಮತ್ತೊಂದು ಸುತ್ತಿನ ಸಂಕಷ್ಟ ಎದುರಾಗಲಿದೆ.
-ಅರುಣ್ ನವಲಿ ಪವರ್