ಶಿವಮೊಗ್ಗ: ಎಲ್ಲಾ ಶಾಸಕರ ವೇತನವನ್ನು ಕಡಿತಗೊಳಿಸಿ, ಈ ಕೂಡಲೇ, ಸರ್ಕಾರ ಕೊರೋನಾ ವಾರಿಯರ್ಸ್ಗೆ ಸಂಬಳ ನೀಡಬೇಕೆಂದು ಚಿತ್ರದುರ್ಗ ಎಂ.ಎಲ್.ಸಿ ರಘು ಆಚಾರ್ ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಸಿ.ಎಂ. ಯಡಿಯೂರಪ್ಪ ಮೇಲೆ ಬಹಳ ಗೌರವವಿದೆ. ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆನೆ. ಕಳೆದ ನಾಲ್ಕು ತಿಂಗಳಿನಿಂದ ವಾರಿಯರ್ಸ್ಗೆ, ವೇತನ ಪಾವತಿಸಿಲ್ಲ. ಹೀಗಾಗಿ, ಮುಂದಿನ 15 ದಿನಗಳಲ್ಲಿ ವೇತನ ಪಾವತಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ, ನಮ್ಮ ಪ್ರಾಣ ಉಳಿಸುವವರ ವಾರಿಯರ್ ಗಳ ಸಂಬಳ ತಡೆಹಿಡಿಯಬೇಡಿ. ಎಲ್ಲಾ ಶಾಸಕರ ವೇತನ ತಡೆ ಹಿಡಿದು ವಾರಿಯರ್ ಗಳಿಗೆ ವೇತನ ನೀಡಿ. ಪಾಪ, ಅವರು ಮಿನಿಮಮ್ ಬಜೆಟ್ನಲ್ಲಿ ಬದುಕುವವರು. ಅವರಿಗೆ ಮನೆ ಬಾಡಿಗೆ ಸೇರಿದಂತೆ, ಹಲವಾರು ಕಷ್ಟಗಳಿರುತ್ತವೆ. ಇತಿಮಿತಿಯ ಸಮಸ್ಯೆಯಲ್ಲಿ ಅವರು ಬದುಕುತ್ತಾರೆ. ಶಾಸಕರಿಗೆ ಒಂದು ತಿಂಗಳ ತಡೆ ಹಿಡಿದರೆ, ಅವರು ಸತ್ತು ಹೋಗುವುದಿಲ್ಲ. ನೆಮ್ಮದಿಯಾಗಿ ನಾವೆಲ್ಲಾ ಇದ್ದೇವೆ. ಎಲ್ಲಾ ಶಾಸಕರ ಬಳಿ ಬೇಕಾದಷ್ಟು ಹಣ ಇದೆ. ಒಂದು ತಿಂಗಳ ಸಂಬಳ ಬಂದಿಲ್ಲವಾದರೆ, ನಮಗೇನು ಸಮಸ್ಯೆ ಆಗೋದಿಲ್ಲ. ಬಡವರ್ಯಾರು ಶಾಸಕರಾಗಿಲ್ಲ. ಎಲ್ಲರ ಬಳಿ ಮತ್ತೊಂದು ಎಲೆಕ್ಷನ್ ಮಾಡುವಷ್ಟು ಹಣ ಇದೆ. ಹೀಗಾಗಿ ನಮಗೆ ವೇತನ ನೀಡದೇ ಅವರಿಗೆ ನೀಡಿ ಅಂತಾ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೇ, ಶಾಸಕರು, ಸಚಿವರು ಸೇರಿದಂತೆ, ಜನಪ್ರತಿನಿಧಿಗಳು ಕೊವಿಡ್ ಆಸ್ಪತ್ರೆಗೆ ತೆರಳಿ ಕೊರೋನಾ ಸೋಂಕಿತರನ್ನು ಮಾತನಾಡಿಸಲಿ ಎಂದೂ ಕೂಡ ಹೇಳಿದ್ದಾರೆ. ವೈದ್ಯರು ಸೋಂಕಿತರ ಬಳಿ ತೆರಳಿ ಸಾಂತ್ವನ ಹೇಳಲು, ಮೊದಲು ಜನಪ್ರತಿನಿಧಿಗಳು, ಕೊವಿಡ್ ಆಸ್ಪತ್ರೆಗೆ ಹೋಗುವಂತಾಗಲಿ. ಎಷ್ಟೋ ವೈದ್ಯರು ಕೊವಿಡ್ ಆಸ್ಪತ್ರೆಗೆ ತೆರಳುವುದಿಲ್ಲ. ಅವರೆಲ್ಲರೂ ಹೋಗಿ ಸೋಂಕಿತರಿಗೆ ಸಾಂತ್ವನ ಹೇಳುವ ಕೆಲಸ ಮಾಡಲಿ. ಆಗ ಕೊರೋನಾ ಸೋಂಕಿತರಿಗೆ ಭಯ ದೂರ ಹೋಗಲು ಸಹಕಾರಿಯಾಗುತ್ತದೆ. ಜನಪ್ರತಿನಿಧಿಗಳು, ಕೇವಲ ಮೀಟಿಂಗ್ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬ ಜನಪ್ರತಿನಿಧಿಗಳು ಕೊವಿಡ್ ಆಸ್ಪತ್ರೆಗೆ ತೆರಳಿ ಸೋಂಕಿತರಿಗೆ ಸಾಂತ್ವನ ಹೇಳಲಿ. ನಾನು ಈಗಾಗಲೇ, ಪಿಪಿಇ ಕಿಟ್ ಹಾಕಿಕೊಂಡು, ಕೊವಿಡ್ ಆಸ್ಪತ್ರೆಗೆ ಹೋಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
-ಗೋ.ವ. ಮೋಹನಕೃಷ್ಣ