Wednesday, January 22, 2025

ಪ್ರೀತಿ ಹೆಸರಿನಲ್ಲಿ ಲಕ್ಷ್ಮಿ & ಗ್ಯಾಂಗ್​ ಬರೋಬ್ಬರಿ 1 ಕೋಟಿಗೂ ಅಧಿಕ ಹಣ ಲೂಟಿ!

ಹಾಸನ : ಸುಂದರವಾದ ಫೋಟೋ ನೋಡಿದ‌ವನಿಗೆ ಆಕೆಯ ಮೇಲೆ ಪ್ರೀತಿ ಹುಟ್ಟಿತ್ತು. ನಾ ಮದ್ವೆಯಾದ್ರೆ ಇವಳನ್ನೆ ಅನ್ನುವಷ್ಟರ ಮಟ್ಟಿಗೆ ಅವನಲ್ಲಿ ಗಾಢಪ್ರೀತಿ ಮೂಡಿತ್ತು. ಮ್ಯಾಟ್ರಿಮೊನಿಯಲ್ಲಿ ಫೋಟೋ ನೋಡಿ ಫುಲ್ ಫಿದಾ ಆಗ್ಬಿಟ್ಟಿದ್ದ. ಆಕೆಯೂ ಆತನ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟು ಪರಸ್ಪರ ಪ್ರೀತಿಸುತ್ತಿದ್ದರು. ಅದು ಯಾವ ರೀತಿ ಪ್ರೀತಿ ಪ್ರೇಮ ಅನ್ನೋ ನಿಜಬಣ್ಣ 9 ತಿಂಗಳ ನಂತರ ಬಯಲಾಗಿದೆ.

ಲಕ್ಷ್ಮಿ ಅಲಿಯಾಸ್ ಲಕ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕಿನ ಯಲ್ಲಂಪಲ್ಲಿ ಗ್ರಾಮದವಳು. ಈಕೆ‌ ಫೋಟೋಗಳಲ್ಲಿ ಟೀನೇಜ್ ಗರ್ಲ್ ಥರಾ ಫೋಸ್ ಕೊಟ್ಟಿರುವ ಈಕೆ ವಯಸ್ಸು 32. ಮ್ಯಾಟ್ರಿಮೊನಿಯಲ್ಲಿ ಫೋಟೋ ಅಪ್ ಲೋಡ್ ಮಾಡಿ ವರನ ಸರ್ಚ್ ನಲ್ಲಿದ್ದಳು. ಆ ಕಲರ್ ಫುಲ್ ಫೋಟೋ ನೋಡಿದ ಹಾಸನದ ವಿಜಯನಗರ ವಾಸಿ ಪರಮೇಶ್, ಆಕೆಯ ನಂಬರ್ ಪಡೆದು ಲವ್ ಪ್ರಫೋಸ್ ಮಾಡಿಬಿಟ್ಟಿದ್ದ. ಆಕೆಯೂ ಆತನ ಪ್ರೀತಿಯನ್ನ ಒಪ್ಪಿಕೊಂಡು ಮದ್ವೆಯಾಗೋದಾಗಿ ಹೇಳಿದ್ದಳು. ಸೂಪರ್ ಹೆಂಡ್ತಿ ಅಂತ ಅನ್ಕೊಂಡ್ ಆಕೆ ಹೇಳಿದ ಕಡೆ ಹೋಗಿ ಲಕ್ಷ್ಮಿಯನ್ನು ಪರಮೇಶ ಮೀಟ್ ಮಾಡಿ ಬರುತ್ತಿದ್ದ.

ಮೊದಲ‌ ಭೇಟಿಯಲ್ಲಿ 5 ಸಾವಿರ ಹಣ ಪಡೆದಿದ್ದಳು ಲಕ್ಷ್ಮಿ. ಆದ್ರೆ ಅಮಾಯಕ ಹಳ್ಳಿಹೈದ ಪರಮೇಶ ಕೇಳಿ ಕೇಳಿದಾಗಲೆಲ್ಲ ಆಕೆಯ ಅಕೌಂಟ್ ಗೆ ಹಣ ಹಾಕುತ್ತಿದ್ದ. ಹಾಸನಕ್ಕೆ ಬಂದಾಗ ಹೈ ಫೈ ಲಾಡ್ಜ್ ನಲ್ಲಿ ಉಳಿಸಿ ಆತಿಥ್ಯ ನೀಡಿ ಕಳುಹಿಸುತ್ತಿದ್ದ. ಆಕೆ ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದೀನಿ ಅಂತ ಹೇಳ್ಕೊಂಡಿದ್ದಳು. ಡಬಲ್ ರೆಸ್ಪೆಕ್ಟ್ ಜೊತೆ ವಿಶೇಷ ಆತಿಥ್ಯ ನೀಡುತ್ತಿದ್ದನು. ಇತ್ತೀಚೆಗೆ ಪರಮೇಶನಿಗೆ ನಿನ್ನನ್ನು ನಾ ಮದ್ವೆಯಾಗಲ್ಲ ಅಂತ ಹೇಳಲು ಶುರುಮಾಡಿದ್ದಳು. ಒಂಬತ್ತು ತಿಂಗಳಲ್ಲಿ ಬರೋಬ್ಬರಿ‌ 6 ಲಕ್ಷ ಹಣವನ್ನು ಆಕೆಯ ಅಕೌಂಟ್ ಗೆ ಹಾಕಿ ಪಾಪರ್ ಆಗಿದ್ದ ಪರಮೇಶಿ. ಹಾಗಾದ್ರೆ ನಾ ಕೊಟ್ಟಿರೋ 6 ಲಕ್ಷ ಹಣ ವಾಪಸ್ ಕೊಡು ಅಂತ ಕೇಳಿದಾಗ ರೇಪ್ ಕೇಸ್ ಕೊಡ್ತೀನಿ ಅಂತ ಬೆದರಿಕೆ ಹಾಕಿದ್ದಳು ಲಕ್ಷ್ಮಿ. ಅಷ್ಟೆ ಅಲ್ಲ ನಕಲಿ ಪೊಲೀಸ್ ಇನ್ಸ್ ಪೆಕ್ಟರ್ ರೆಡಿ ಮಾಡಿ ಅವಾಜ್ ಹಾಕಿಸಿದ್ದಳು. ಆಗ ಗೊತ್ತಾಯಿತು ಪರಮೇಶನಿಗೆ ಇದು ಪ್ರೀತಿಯಲ್ಲ, ಮೋಸದ ಬಲೆ‌ ಅಂತ.

ಚಿಕ್ಕಬಳ್ಳಾಪುರದ ಯಲ್ಲಂಪಲ್ಲಿಯ ಲಕ್ಷ್ಮಿಯ ಮೋಸದ ‌ಜಾಲದಲ್ಲಿ ಬಿದ್ದಿದ್ದು ಅರಿವಾಗಿ ಪರಮೇಶ ಹೋರಾಟಗಾರರಾದ ಭಾಗ್ಯ, ಶಿವಮ್ಮರ ಮನೆ ಮುಂದೆ ಬಂದು ನಿಂತನು. ಹಾಸನ ಮಹಿಳಾ ಠಾಣೆಗೆ ದೂರನ್ನು ಸಹ ಕೊಟ್ಟನು. ಪ್ಲಾನ್ ಮಾಡಿ ಲಕ್ಷ್ಮಿ ಅಂಡ್ ಗ್ಯಾಂಗನ್ನು ಹಾಸನಕ್ಕೆ ಕರೆಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರೀತಿ ಹೆಸರಲ್ಲಿ‌ ಹತ್ತಾರು ಹುಡುಗರನ್ನ ಬಲೆಗೆ ಬೀಳಿಸಿ ಲಕ್ಷ್ಮಿ ಬರೋಬ್ಬರಿ 1 ಕೋಟಿಗೂ ಅಧಿಕ ಹಣ ಕಿತ್ತಿದ್ದಾಳೆಂಬುದು ತನಿಖೆ ವೇಳೆ ಗೊತ್ತಾಗಿದೆ. ಲಕ್ಷ್ಮಿ ಮತ್ತು ಆತನ ಜೊತೆ ಮೋಸ ಜಾಲದ ಪಾಲುದಾರನಾಗಿದ್ದ ಆ್ಯಂಟಿ ಕ್ರೈಮ್ ಅಂಡ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ಧಮ್ಕಿ ಹಾಕುತ್ತಿದ್ದ ಕೋಲಾರ ಮೂಲದ ಶಿವನನ್ನು ಪೊಲೀಸರು ಬಂಧಿಸಿದ್ದಾರೆ.

– ಪ್ರತಾಪ್ ಹಿರೀಸಾವೆ

RELATED ARTICLES

Related Articles

TRENDING ARTICLES