ಮೈಸೂರು : ಇಂದು ೬ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ.ಕೊರೊನಾ ಭೀತಿ ಹಿನ್ನಲೆ ಸಾಮೂಹಿಕ ಆಚರಣೆಗೆ ಬ್ರೇಕ್ ಬಿದ್ದಿದೆ.ಪ್ರತಿವರ್ಷದಂತೆ ಈ ಬಾರಿಯೂ ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡಲು ಸಜ್ಜಾಗುತ್ತಿದ್ದ ಯೋಗಪಟುಗಳ ಉತ್ಸಾಹಕ್ಕೆ ಕೊರೊನಾ ಬ್ರೇಕ್ ಹಾಕಿದೆ.
ಮನೆಗಳಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಯೋಗದಿನಾಚರಣೆಯಲ್ಲಿ ಭಾಗವಹಿಸುವಂತೆ ಜಿಲ್ಲಾಡಳಿತ ಕರೆ ನೀಡಿದೆ.ಈ ಹಿನ್ನಲೆ ಮೈಸೂರಿನ ಅರಮನೆಯಲ್ಲಿ ಕೇವಲ ಬೆರಳೆಣಿಕೆ ಮಂದಿ ಮಾತ್ರ ಯೋಗ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.ಅರಮನೆ ಆವರಣದಲ್ಲಿ ನಡೆದ ಯೋಗ ಪ್ರದರ್ಶನ ಫೇಸ್ಬುಕ್ ಲೈವ್ ನಲ್ಲಿ ನೇರ ಪ್ರಸಾರ ನೀಡಲಾಗಿದೆ.ಮನೆಗಳಲ್ಲಿ ಯೋಗಾಭ್ಯಾಸ ಮಾಡುವವರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಆವರಣದಲ್ಲಿ ಯೋಗಾಸನ ಪ್ರದರ್ಶನ ಆಯೋಜಿಸಲಾಗಿತ್ತು. ೨೦೧೭ ರಲ್ಲಿ ನಡೆದ ಸಾಮೂಹಿಕ ಯೋಗ ಪ್ರದರ್ಶನ ಗಿನ್ನಿಸ್ ದಾಖಲೆ ನಿರ್ಮಿಸಿತು.ಈ ಮೂಲಕ ಮೈಸೂರು ಯೋಗಚಟುವಟಿಕೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು.ಈ ವರ್ಷ ೧ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇತ್ತು.ಈ ವರ್ಷದ ಪ್ರಯತ್ನಕ್ಕೆ ಕೊರೊನಾ ನಿರಾಸೆ ತಂದಿದೆ.
ಇಂದಿನ ಯೋಗಭ್ಯಾಸದಲ್ಲಿ ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಶಶಂಕಾಸನ, ಪವನ ಮುಕ್ತಾಸನ, ಮಕರಾಸನ, ಭುಜಂಗಾಸನ, ಸೇತು ಬಂದಾಸನ, ಅರ್ಧ ಹಲಾಸನ ಸೇರಿದಂತೆ ಇನ್ನಿತರ ಆಸನಗಳನ್ನು, ಪ್ರಾಣಾಯಾಮ ಸೇರಿದಂತೆ ಸರ್ಕಾರದ ಶಿಷ್ಟಾಚಾರದಂತೆ ಅಭ್ಯಾಸ ಮಾಡಲಾಯಿತು…