ಉಡುಪಿ : ಸಾವಿರದ ಐನೂರು ವರ್ಷಗಳಷ್ಟು ಇತಿಹಾಸ ಹೊಂದಿರುವ ಪೊಡವಿಗೊಡೆಯನ ಶ್ರೀಕೃಷ್ಣಮಠಕ್ಕೆ ದೇಸೀ ಟಚ್ ಕೊಡುವ ಕಾರ್ಯ ಮಠದಲ್ಲೀಗ ನಡೆಯುತ್ತಿದೆ. ಮಠದ ಗೋಡೆಗಳಿಗೆ ಪ್ರಾಕೃತಿಕ ಬಣ್ಣದ ಮೆರುಗು ನೀಡಲು ಅದಮಾರು ಕಿರಿಯ ಶ್ರೀಗಳು ನಿರ್ಧರಿಸಿದ್ದಾರೆ. ಕೆಮಿಕಲ್ ಪೇಯಿಂಟ್ ಬದಲಾಗಿ ಪ್ರಾಕೃತಿಕ ಬಣ್ಣ ಬಳಿಯುವ ಕಾರ್ಯ ಇದೀಗ ಮಠದಲ್ಲಿ ಪ್ರಾರಂಭಗೊಂಡಿದೆ.
ಕೆಂಪು ಮಣ್ಣು ,ಗೋಮಯ ಸುಣ್ಣ ಗೋಪಿ ಅಂಟು ಬಳಸಿ ಬಣ್ಣ ಬಳಿಯಲಾಗುತ್ತಿದ್ದು, ಪರ್ಯಾಯ ಶ್ರೀಗಳು ತುಂಬ ಮುತುವರ್ಜಿಯಿಂದ ಇದನ್ನು ಮಾಡಿಸುತ್ತಿದ್ದಾರೆ. ಮುಖ್ಯವಾಗಿ ಕೃಷ್ಣಮಠದ ಬಡಗು ಮಾಳಿಗೆ, ಗೋ ಶಾಲೆ, ಪಾಕಶಾಲೆ ಮತ್ತು ಭೋಜನ ಶಾಲೆಯ ಗೋಡೆಗಳಿಗೆ ಪ್ರಾಕೃತಿಕ ಬಣ್ಣ ಬಳಿಯುವ ಕಾರ್ಯ ಪ್ರಗತಿಯಲ್ಲಿದೆ. ಇವೆಲ್ಲ ಕೆಲಸ ಮುಗಿದ ಬಳಿಕ ಕೃಷ್ಣಮಠ ಕೆಮಿಕಲ್ ಫ್ರೀ ಆಗಿ ಕಂಗೊಳಿಸಲಿದೆ. ಪ್ರಾಕೃತಿಕ ಬಣ್ಣದಿಂದ ಕಣ್ಣಿಗೂ ಹಿತವಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿರುವ ಶ್ರೀಗಳು,ಇದರಲ್ಲಿ ಕೀಟನಾಶಕ ಇರುವುದಿಲ್ಲ. ಹಿಂದೆಲ್ಲ ಮನೆಗಳಿಗೆ ಇದೇ ರೀತಿಯ ಬಣ್ಣವನ್ನು ಬಳಸುತ್ತಿದ್ದರು. ನಾವು ಅದನ್ನು ನೆನಪಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಅದಮಾರು ಕಿರಿಯ ಶ್ರೀಗಳಾದ ಈಶಪ್ರಿಯ ತೀರ್ಥರು ಪ್ರತಿಕ್ರಿಯೆ ನೀಡಿದ್ದಾರೆ.