ಬೆಂಗಳೂರು : ರೋಹಿತ್ ಶರ್ಮಾ ಅವರ ಶತಕ , ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಕೈವಶ ಮಾಡಿಕೊಂಡಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ (131) ಶತಕದ ನೆರವಿನಿಂದ 286 ರನ್ ಮಾಡಿತು.
ಹಿಟ್ ಮ್ಯಾನ್ ರೋಹಿತ್ ಶರ್ಮಾ ( 119) 29 ನೇ ಏಕದಿನ ಶತಕ ಸಿಡಿಸಿ ಮಿಂಚಿದರು. ಶರ್ಮಾಗೆ ಸಾಥ್ ನೀಡಿದ ಕ್ಯಾಪ್ಟನ್ ಕೊಹ್ಲಿ 89 ರನ್ ಬಾರಿಸಿದರು. ಶಿಖರ್ ಧವನ್ ಗಾಯಗೊಂಡಿದ್ದರಿಂದ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ‘ರಾಜ್ ಕೋಟ್’ ಮ್ಯಾಚ್ ಹೀರೋ ಕನ್ನಡಿಗ ಕೆ.ಎಲ್ ರಾಹುಲ್ (19) ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ರೋಹಿತ್ ಶರ್ಮಾ, ಕೊಹ್ಲಿ ಪೆವಿಲಿಯನ್ ಸೇರಿದ ಬಳಿಕ ಶ್ರೇಯಸ್ ಅಯ್ಯರ್ ( ಅಜೇಯ 44) ಮತ್ತು ಮನೀಷ್ ಪಾಂಡೆ (ಅಜೇಯ 8) ಗೆಲುವಿನ ದಡ ಸೇರಿಸಿದರು. 7ವಿಕೆಟ್ ಗಳ ಜಯದೊಂದಿಗೆ ಭಾರತ ಸರಣಿ ತನ್ನದಾಗಿಸಿಕೊಂಡಿತು.
ಬೃಹತ್ ಮೊತ್ತ ಪೇರಿಸುವ ಲೆಕ್ಕಾಚಾರದಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ನಾಯಕ ಫಿಂಚ್ ಲೆಕ್ಕಾಚಾರ ತಲೆಕೆಳಗಾಯಿತು.
ಆರಂಭಿಕವಾಗಿ ಕಣಕ್ಕಿಳಿದ ಫಿಂಚ್ ಸ್ವತಃ ವೈಫಲ್ಯ ಅನುಭವಿಸಿದರು. ಕೇವಲ 17 ರನ್ ಮಾಡಿ ಪೆವಿಲಿಯನ್ ಸೇರಿದರು.ಮತ್ತೊಬ್ಬ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಸಂಪಾದನೆ ಕೇವಲ 3 ರನ್ ಮಾತ್ರ.
ಶತಕ ವೀರ ಸ್ಮಿತ್ ಮತ್ತು ಲ್ಯಾಬುಶಾನೆ (54) ಹೊರತುಪಡಿಸಿ ಯಾವೊಬ್ಬ ಆಸೀಸ್ ಬ್ಯಾಟ್ಸ್ ಮನ್ ಕೂಡ ಭಾರತದ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ. ಪರಿಣಾಮ ಬ್ಯಾಟಿಂಗ್ ಗೆ ನೆರವಾಗುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರಬಲ ಆಸೀಸ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗಳಿಸಿದ್ದು 286 ರನ್ ಮಾತ್ರ. ಭಾರತದ ಪರ ಮೊಹಮ್ಮದ್ ಶಮಿ (4 ವಿಕೆಟ್) ಆಸೀಸ್ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನ ವಾಗಿ ಕಾಡಿದರು.
ಇನ್ನು ಟೀಮ್ ಇಂಡಿಯಾದ ಸೆಂಚುರಿ ಸ್ಟಾರ್ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಕ್ಯಾಪ್ಟನ್ ಕೊಹ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.