ಜೋಧ್ಪುರ : ಪೌರತ್ವ ತಿದ್ದುಪಡಿ ಕಾಯ್ದೆಗೆ ದೇಶದೆಲ್ಲೆಡೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಪೌರತ್ವದ ವಿಚಾರವಾಗಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಈ ನಡುವೆ ಕೇಂದ್ರ ಗೃಹಸಚಿವ ಅಮಿತ್ ಶಾ, ‘ಪೌರತ್ವ ತಿದ್ದುಪಡಿ ಕಾಯ್ದೆಗೆ ಏನೇ ವಿರೋಧವಿದ್ದರೂ ಈ ನಿರ್ಧಾರದಿಂದ ಹಿಂದೆ ಸರಿಯೋ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜಸ್ಥಾನದ ಜೋಧ್ಪುರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ದೇಶದ ಯಾವೊಬ್ಬ ನಾಗರಿಕರ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ ಪೌರತ್ವ ನೀಡುತ್ತದೆ. ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ 2015ಕ್ಕೂ ಮುನ್ನ ನೆರೆಯ ಮೂರು ಮುಸ್ಲಿಂ ರಾಷ್ಟ್ರಗಳಿಂದ ಮುಸ್ಲಿಮೇತರರು ಭಾರತಕ್ಕೆ ಬಂದಿದ್ದಾರೆ. ಅಂತಹ ನಿರಾಶ್ರಿತರಿಗೆ ಪೌರತ್ವ ನೀಡಲು ಈ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಆದರೆ ವಿರೋಧ ಪಕ್ಷಗಳು ಕಾಯ್ದೆ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಆದರೆ, ಎಷ್ಟೇ ವಿರೋಧ ಬರಲಿ , ಎಷ್ಟೇ ಅಡೆತಡೆ ಬರಲಿ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.