Sunday, April 28, 2024

ಕಿವೀಸ್ ಕಿವಿ ಹಿಂಡಿದ ಆಸೀಸ್​​..!

ತೀವ್ರ ಕುತೂಹಲ ಕೆರಳಿಸಿದ್ದ ಆಸಿಸ್​-ಕಿವೀಸ್​ ಫೈಟ್​ನಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು. ಮಿಚೆಲ್​ ಸ್ಟಾರ್ಕ್​ರ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್​​ ಸತತ 2ನೇ ಸೋಲಿಗೆ ಶರಣಾಯ್ತು. ಕಿವೀಸ್ ತಂಡವನ್ನು 86 ರನ್​ಗಳಿಂದ ಮಣಿಸಿದ ಆಸಿಸ್​ 14 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.
ಟಾಸ್​ ಗೆದ್ದು ಬ್ಯಾಟಿಂಗ್​ಗಿಳಿದ ಆಸ್ಟ್ರೇಲಿಯಾ ಬಳಗಕ್ಕೆ ಕಿವೀಸ್​​ ಬೌಲರ್​ಗಳು ಶಾಕ್​ ನೀಡಿದ್ರು. ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಆ್ಯರೋನ್​ ಫಿಂಚ್​, ಡೇವಿಡ್​ ವಾರ್ನರ್​ ನಿರಾಸೆ ಮೂಡಿಸಿದ್ರು. ಫಿಂಚ್​ 8 ರನ್​ಗಳಿಗೆ ಔಟಾದ್ರೆ, ವಾರ್ನರ್​ 16 ರನ್​ಗಳಿಸಿ ನಿರ್ಗಮಿಸಿದ್ರು. ಬಳಿಕ ಕಣಕ್ಕಿಳಿದ ಸ್ಟೀವ್​ ಸ್ಮಿತ್​ ಆಟವೂ 5 ರನ್​ಗಳಿಗೆ ಅಂತ್ಯವಾಯ್ತು.
ಒಂದೆಡೆ ಪೆವಿಲಿಯನ್​ ಪರೇಡ್​​ ನಡೀತಾ ಇದ್ರೆ ನಿಧಾನವಾಗಿ ಇನ್ನಿಂಗ್ಸ್​ ಕಟ್ಟಿದ ಮಾರ್ಕಸ್​ ಸ್ಟೋಯಿನಿಸ್​ ಭರವಸೆ ಮೂಡಿಸಿದ್ರು. ಆದ್ರೆ 21 ರನ್​ಗಳಿಗೆ ಸ್ಟೋಯಿನಿಸ್​ ಆಟ ಅಂತ್ಯವಾಯ್ತು. ಇದರ ಬೆನ್ನಲ್ಲೇ ಗ್ಲೇನ್​ ಮ್ಯಾಕ್ಸ್​ವೆಲ್​ ನಿರ್ಗಮಿಸಿದ್ರು. ಪರಿಣಾಮ 92 ರನ್​ಗಳಿಗೆ ಆಸಿಸ್​ 5 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಜೊತೆಯಾದ ಉಸ್ಮಾನ್ ಖವಾಜಾ ಹಾಗೂ ಅಲೆಕ್ಸ್​ ಕ್ಯಾರಿ ತಂಡಕ್ಕೆ ಆಸರೆಯಾದ್ರು. ಅರ್ಧಶತಕ ಸಿಡಿಸಿ ಮಿಂಚಿದ ಇಬ್ಬರೂ ತಂಡಕ್ಕೆ 107 ರನ್​ಗಳ ಜೊತೆಯಾಟದ ಕಾಣಿಕೆ ನೀಡಿದ್ರು. ಉತ್ತಮ ಬ್ಯಾಟಿಂಗ್​ ನಡೆಸಿದ ಅಲೆಕ್ಸ್​ ಕ್ಯಾರಿ, ಕಿವೀಸ್​ ನಾಯಕ ಕೇನ್​ ವಿಲಿಯಮ್​ಸನ್​ಗೆ ವಿಕೆಟ್​ ಒಪ್ಪಿಸಿದ್ರು.
ಟ್ರೆಂಟ್​ ಬೋಲ್ಟ್​ ಹ್ಯಾಟ್ರಿಕ್​ ಮ್ಯಾಜಿಕ್​! : ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಖವಾಜಾ ಕೊನೆಯ ಓವರ್​ನಲ್ಲಿ ಟ್ರೆಂಟ್​ ಬೋಲ್ಟ್​​ ಗೆ ವಿಕೆಟ್​ ಒಪ್ಪಿಸಿದ್ರು. ಖವಾಜಾ ಮಿಚೆಲ್​ ಸ್ಟಾರ್ಕ್​ ಕ್ಲೀನ್ ಬೌಲ್ಡ್​ ಆದರೆ, ಮರು ಎಸೆತದಲ್ಲೇ ಬೆಹ್ರೇನ್​ಡಾರ್ಫ್​​ ಕೂಡ ಎಲ್​ಬಿಗೆ ಬಲಿಯಾದರು. ಈ ಮೂಲಕ ಬೌಲ್ಟ್​ ಹ್ಯಾಟ್ರಿಕ್ ವಿಕೆಟ್ ಕಿತ್ತರು. ಈ ಬಾರಿಯ ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಬೌಲರ್ ಖ್ಯಾತಿಗೆ ಪಾತ್ರರಾದ್ರು. ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್​ಗೆ 9 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು.
 244 ರನ್​ಗಳ ಗುರಿ ಬೆನ್ನತ್ತಿದ ಕಿವೀಸ್​ ಆರಂಭದಲ್ಲೇ ಎಡವಿತು. ಆರಂಬಿಕ ಆಟಗಾರ ಹೆನ್ರಿ ನಿಕೋಲಸ್​ 8 ರನ್​ಗಳಿಗೆ ಪೆವಿಲಿಯನ್​ ಸೇರಿದ್ರೆ, 20 ರನ್​ಗಳಿಗೆ ಮಾರ್ಟಿನ್​ ಗಪ್ಟಿಲ್​ ಆಟ ಅಂತ್ಯವಾಯ್ತು. ಬಳಿಕ ಜೊತೆಯಾದ ಕೇನ್​ ವಿಲಿಯಮ್​ಸನ್​, ರಾಸ್​ ಟೇಲರ್​ ತಂಡಕ್ಕೆ ಚೇತರಿಕೆ ನೀಡಿದ್ರು. 3 ವಿಕೆಟ್​ಗೆ 55 ರನ್​ಗಳು ಹರಿದು ಬಂದ್ವು.
ಆದ್ರೆ ಟೇಲರ್​, ವಿಲಿಯಮ್​ಸನ್​ ಪತನದ ಬಳಿಕ ಕಿವೀಸ್​ ಪಾಳಯದ ಕುಸಿತ ಆರಂಭವಾಯ್ತು. ಕೋಲಿನ್​ ಡಿ ಗ್ರಾಂಡ್​ ಹೋಮ್​, ಟಾಮ್​ ಲಾಥಮ್​,ಜೇಮ್ಸ್​ ನೀಶಮ್​ ಸದ್ದಿಲ್ಲದೇ ಪೆವಿಲಿಯನ್​ ಸೇರಿದ್ರು. ಬಾಲಂಗೋಚಿಗಳ ಬ್ಯಾಟ್​ ಸದ್ದು ಮಾಡಲೇ ಇಲ್ಲ.. ಪರಿಣಾಮ 157 ರನ್​ಗಳಿಗೆ ಕಿವೀಸ್​ ಪಡೆ ಆಲೌಟ್​ ಆಯ್ತು. 86 ರನ್​ಗಳ ಜಯ ಸಾಧಿಸಿದ ಆಸಿಸ್​ ಗೆಲುವಿನ ಕೇಕೆ ಹಾಕಿತು.
ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ 86 ರನ್​ಗಳ ಸೋಲುಂಡಿತು. ಇದರೊಂದಿಗೆ 2015ರ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದ ಕಿವೀಸ್​ ನಿರಾಸೆ ಅನುಭವಿಸಿತು.

RELATED ARTICLES

Related Articles

TRENDING ARTICLES