ತೀವ್ರ ಕುತೂಹಲ ಕೆರಳಿಸಿದ್ದ ಆಸಿಸ್-ಕಿವೀಸ್ ಫೈಟ್ನಲ್ಲಿ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು. ಮಿಚೆಲ್ ಸ್ಟಾರ್ಕ್ರ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಸತತ 2ನೇ ಸೋಲಿಗೆ ಶರಣಾಯ್ತು. ಕಿವೀಸ್ ತಂಡವನ್ನು 86 ರನ್ಗಳಿಂದ ಮಣಿಸಿದ ಆಸಿಸ್ 14 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ಗಿಳಿದ ಆಸ್ಟ್ರೇಲಿಯಾ ಬಳಗಕ್ಕೆ ಕಿವೀಸ್ ಬೌಲರ್ಗಳು ಶಾಕ್ ನೀಡಿದ್ರು. ಆರಂಭಿಕ ಆಘಾತ ಎದುರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಆ್ಯರೋನ್ ಫಿಂಚ್, ಡೇವಿಡ್ ವಾರ್ನರ್ ನಿರಾಸೆ ಮೂಡಿಸಿದ್ರು. ಫಿಂಚ್ 8 ರನ್ಗಳಿಗೆ ಔಟಾದ್ರೆ, ವಾರ್ನರ್ 16 ರನ್ಗಳಿಸಿ ನಿರ್ಗಮಿಸಿದ್ರು. ಬಳಿಕ ಕಣಕ್ಕಿಳಿದ ಸ್ಟೀವ್ ಸ್ಮಿತ್ ಆಟವೂ 5 ರನ್ಗಳಿಗೆ ಅಂತ್ಯವಾಯ್ತು.
ಒಂದೆಡೆ ಪೆವಿಲಿಯನ್ ಪರೇಡ್ ನಡೀತಾ ಇದ್ರೆ ನಿಧಾನವಾಗಿ ಇನ್ನಿಂಗ್ಸ್ ಕಟ್ಟಿದ ಮಾರ್ಕಸ್ ಸ್ಟೋಯಿನಿಸ್ ಭರವಸೆ ಮೂಡಿಸಿದ್ರು. ಆದ್ರೆ 21 ರನ್ಗಳಿಗೆ ಸ್ಟೋಯಿನಿಸ್ ಆಟ ಅಂತ್ಯವಾಯ್ತು. ಇದರ ಬೆನ್ನಲ್ಲೇ ಗ್ಲೇನ್ ಮ್ಯಾಕ್ಸ್ವೆಲ್ ನಿರ್ಗಮಿಸಿದ್ರು. ಪರಿಣಾಮ 92 ರನ್ಗಳಿಗೆ ಆಸಿಸ್ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಬಳಿಕ ಜೊತೆಯಾದ ಉಸ್ಮಾನ್ ಖವಾಜಾ ಹಾಗೂ ಅಲೆಕ್ಸ್ ಕ್ಯಾರಿ ತಂಡಕ್ಕೆ ಆಸರೆಯಾದ್ರು. ಅರ್ಧಶತಕ ಸಿಡಿಸಿ ಮಿಂಚಿದ ಇಬ್ಬರೂ ತಂಡಕ್ಕೆ 107 ರನ್ಗಳ ಜೊತೆಯಾಟದ ಕಾಣಿಕೆ ನೀಡಿದ್ರು. ಉತ್ತಮ ಬ್ಯಾಟಿಂಗ್ ನಡೆಸಿದ ಅಲೆಕ್ಸ್ ಕ್ಯಾರಿ, ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ಗೆ ವಿಕೆಟ್ ಒಪ್ಪಿಸಿದ್ರು.
ಟ್ರೆಂಟ್ ಬೋಲ್ಟ್ ಹ್ಯಾಟ್ರಿಕ್ ಮ್ಯಾಜಿಕ್! : ಅಂತಿಮ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಖವಾಜಾ ಕೊನೆಯ ಓವರ್ನಲ್ಲಿ ಟ್ರೆಂಟ್ ಬೋಲ್ಟ್ ಗೆ ವಿಕೆಟ್ ಒಪ್ಪಿಸಿದ್ರು. ಖವಾಜಾ ಮಿಚೆಲ್ ಸ್ಟಾರ್ಕ್ ಕ್ಲೀನ್ ಬೌಲ್ಡ್ ಆದರೆ, ಮರು ಎಸೆತದಲ್ಲೇ ಬೆಹ್ರೇನ್ಡಾರ್ಫ್ ಕೂಡ ಎಲ್ಬಿಗೆ ಬಲಿಯಾದರು. ಈ ಮೂಲಕ ಬೌಲ್ಟ್ ಹ್ಯಾಟ್ರಿಕ್ ವಿಕೆಟ್ ಕಿತ್ತರು. ಈ ಬಾರಿಯ ವಿಶ್ವಕಪ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ 2ನೇ ಬೌಲರ್ ಖ್ಯಾತಿಗೆ ಪಾತ್ರರಾದ್ರು. ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್ಗೆ 9 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು.
244 ರನ್ಗಳ ಗುರಿ ಬೆನ್ನತ್ತಿದ ಕಿವೀಸ್ ಆರಂಭದಲ್ಲೇ ಎಡವಿತು. ಆರಂಬಿಕ ಆಟಗಾರ ಹೆನ್ರಿ ನಿಕೋಲಸ್ 8 ರನ್ಗಳಿಗೆ ಪೆವಿಲಿಯನ್ ಸೇರಿದ್ರೆ, 20 ರನ್ಗಳಿಗೆ ಮಾರ್ಟಿನ್ ಗಪ್ಟಿಲ್ ಆಟ ಅಂತ್ಯವಾಯ್ತು. ಬಳಿಕ ಜೊತೆಯಾದ ಕೇನ್ ವಿಲಿಯಮ್ಸನ್, ರಾಸ್ ಟೇಲರ್ ತಂಡಕ್ಕೆ ಚೇತರಿಕೆ ನೀಡಿದ್ರು. 3 ವಿಕೆಟ್ಗೆ 55 ರನ್ಗಳು ಹರಿದು ಬಂದ್ವು.
ಆದ್ರೆ ಟೇಲರ್, ವಿಲಿಯಮ್ಸನ್ ಪತನದ ಬಳಿಕ ಕಿವೀಸ್ ಪಾಳಯದ ಕುಸಿತ ಆರಂಭವಾಯ್ತು. ಕೋಲಿನ್ ಡಿ ಗ್ರಾಂಡ್ ಹೋಮ್, ಟಾಮ್ ಲಾಥಮ್,ಜೇಮ್ಸ್ ನೀಶಮ್ ಸದ್ದಿಲ್ಲದೇ ಪೆವಿಲಿಯನ್ ಸೇರಿದ್ರು. ಬಾಲಂಗೋಚಿಗಳ ಬ್ಯಾಟ್ ಸದ್ದು ಮಾಡಲೇ ಇಲ್ಲ.. ಪರಿಣಾಮ 157 ರನ್ಗಳಿಗೆ ಕಿವೀಸ್ ಪಡೆ ಆಲೌಟ್ ಆಯ್ತು. 86 ರನ್ಗಳ ಜಯ ಸಾಧಿಸಿದ ಆಸಿಸ್ ಗೆಲುವಿನ ಕೇಕೆ ಹಾಕಿತು.
ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ತಂಡ 86 ರನ್ಗಳ ಸೋಲುಂಡಿತು. ಇದರೊಂದಿಗೆ 2015ರ ವಿಶ್ವಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ಸಾಹದೊಂದಿಗೆ ಕಣಕ್ಕಿಳಿದಿದ್ದ ಕಿವೀಸ್ ನಿರಾಸೆ ಅನುಭವಿಸಿತು.
ಕಿವೀಸ್ ಕಿವಿ ಹಿಂಡಿದ ಆಸೀಸ್..!
TRENDING ARTICLES