Tuesday, November 12, 2024

ಗೆದ್ದ 24 ಗಂಟೆಯೊಳಗೇ ರಾಜೀನಾಮೆಗೆ ಮುಂದಾದ ಪ್ರಜ್ವಲ್​ ರೇವಣ್ಣ..!

ಹಾಸನ : ಗೆದ್ದು 24 ಗಂಟೆ ಆಗುವಷ್ಟರಲ್ಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಜೀನಾಮೆಗೆ ಮುಂದಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸ್ವತಃ ಅವರೇ ಈ ವಿಷಯವನ್ನು ಹೇಳಿದ್ದಾರೆ.
ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಸೋಲನುಭವಿಸಿದ ಹಿನ್ನೆಲೆಯಲ್ಲಿ ಅವರಿಗೆ ಪುನಃ ಹಾಸನವನ್ನು ಬಿಟ್ಟು ಕೊಡೋ ಉದ್ದೇಶದಿಂದ ಪ್ರಜ್ವಲ್ ಈ ತೀರ್ಮಾನಕ್ಕೆ ಮುಂದಾಗಿದ್ದಾರೆ.
ಹೋರಾಟವೇ ಜೀವನ ಅಂದುಕೊಂಡ ದೇವೇಗೌಡ್ರಿಗೆ ಆಕಸ್ಮಿಕ ಸೋಲಾಗಿದೆ. ಈ ಸೋಲಿನಿಂದ ನನಗೆ ನನ್ನ ಗೆಲುವನ್ನು ಸಂಭ್ರಮಿಸುವುದಕ್ಕೂ ಸಾಧ್ಯವಾಗ್ತಿಲ್ಲ. ದೇವೇಗೌಡರಿಗೆ ಮತ್ತು ಪಕ್ಷಕ್ಕೆ ಶಕ್ತಿ ತುಂಬುವ ಉದ್ದೇಶದಿಂದ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ ಅಂತ ಪ್ರಜ್ವಲ್ ಹೇಳಿದ್ದಾರೆ.
ಹಾಸನದಲ್ಲಿ ತಮ್ಮ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಪ್ರಜ್ವಲ್, ತನ್ನ ತೀರ್ಮಾನವನ್ನು ಯಾರೂ ತಪ್ಪಾಗಿ ಭಾವಿಸಬೇಡಿ ಅಂತಲೂ ಮನವಿ ಮಾಡಿದ್ದಾರೆ.
”ತುಮಕೂರು ಜಿಲ್ಲೆಗೂ ದೇವೇಗೌಡರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಲ್ಲಿಗೆ ಹೇಮಾವತಿ ನೀರು ಕೊಟ್ಟಿದ್ದು ದೇವೇಗೌಡರು. ಆದರೂ ಅವರಿಗೆ ಅಲ್ಲಿ ಸೋಲಾಗಿದೆ. ಆದರೂ ಕೆಲ ವಿರೋಧಿಗಳು ದೇವೇಗೌಡರ ಬಗ್ಗೆ ಅಪ ಪ್ರಚಾರ ಮಾಡಿದರು. ನಾನು ರಾತ್ರಿ ಇಡೀ ಚಿಂತಿಸಿದ್ದೇನೆ, ದೇವೇಗೌಡರ ಸೋಲಿನ ಹಿನ್ನೆಲೆಯಲ್ಲಿ ನಾನು ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಹಾಸನದಲ್ಲಿ ರಾಜೀನಾಮೆ ನೀಡಿ ದೇವೇಗೌಡರನ್ನು ಗೆಲ್ಲಿಸಲು ತೀರ್ಮಾನಿಸಿದ್ದೇನೆ. ಈ ಬಗ್ಗೆ ಹಾಸನದ ಜನ ತಪ್ಪು ತಿಳಿಯಬಾರದು. ಹಾಸನದಲ್ಲಿ ದೇವೇಗೌಡರನ್ನು ಗೆಲ್ಲಿಸಿ ವಿಜಯೋತ್ಸವ ಆಚರಿಸೋಣ ಅಂತ ಹೇಳಿದ್ದಾರೆ.
ಮೊಮ್ಮಗನ ಈ ತೀರ್ಮಾನವನ್ನು ದೇವೇಗೌಡರು ಒಪ್ಪುತ್ತಾರೋ? ಅಥವಾ ಈಗಿನ್ನೂ ಗೆದ್ದು ಮೊದಲ ಬಾರಿ ಸಂಸತ್​ ಪ್ರವೇಶಿಸುತ್ತಿದ್ದೀಯ. ರಾಜೀನಾಮೆ ಕೊಡಬೇಡ. ಒಳ್ಳೆಯ ಕೆಲಸಗಳನ್ನು ಮಾಡು ಅಂತ ದೇವೇಗೌಡರು ಪ್ರಜ್ವಲ್​ಗೆ ಕಿವಿಮಾತು ಹೇಳುತ್ತಾರಾ ಅನ್ನೋದನ್ನು ಕಾದು ನೋಡಬೇಕು.

RELATED ARTICLES

Related Articles

TRENDING ARTICLES